(ಹೌ)ಹಾರುವ ತಟ್ಟೆಗಳು

ಹಾರುವ ತಟ್ಟೆಯೊಂದು

ಬಿಳಿಯ ಮೋಡದೊಳಗೆ

ಮಿಂಚಂತೆ ಸೆಳೆಯುವಾಗ

ನೆನ್ನೆ ಕನವರಿಸಿದ

ಶ್ವೇತ ದೇವತೆಯೊಬ್ಬಳು

ಇಳಿದು

ಬರಬಹುದೆಂದು

ಕಾದು ಕೂತು-

ಮೋಹ ದೇವತೆ ನೀನು

ಕೈಯಲ್ಲಿ ಅಮೃತವನ್ನಿಟ್ಟುಕೊಂಡು

ಗುಟುಕೂ ಕೊಡದೆ ಮಾಯವಾದವಳು

ಮತ್ಸ ಕನ್ಯೆ ನೀನು

ನೀರಲ್ಲಿ ಗಾಳಿ ಬಲೂನು

ಹೊತ್ತು ಹೊರಟೆ

ಮೀನ

ನೀರ

ಆಳದಲ್ಲಿ

ಅಲೆಯೊಂದು

ಅಬ್ಬರಿಸಿ ನಿಂತಂತೆ

ತಿಮಿಂಗಲದ ಅಡಿಯ ನೆರಳಲ್ಲಿ

ಹೂಮರಿಗಳು

ಪಯಣ ಹೊರಟಂತೆ

ಹೊರಟಿದ್ದೆ

ಹೊತ್ತೊಯ್ದ

ಅಲೆಯೊಂದು

ದಡ ಮುಟ್ಟಿಸಿ

.. …

ಮತ್ಸ ಕನ್ಯೆ

ಮೋಹದೇವತೆ

ಬೆಳದಿಂಗಳು

ರಾತ್ರಿ ಕತ್ತಲಲ್ಲಿ

ಹಾರುವ ತಟ್ಟೆಯೊಂದಿಗೆ

ಅದೃಶ್ಯವಾದ

ದೇವತೆಯೇ

ಮೋಹಕ ಬೆಳದಿಂಗಳು

ಇತ್ತ

ಮೋಹಕತೆಯನ್ನು

ನನಗೊಂದಿಷ್ಟು

ಕೊಡೇ

ಎಂದು ರಸವಾದಿಯಂತೆ

ಹುಡುಕುತ್ತ ಹೊರಟೆ.

ಅಲ್ಲಿ ಎನೋ ಇರಬಹುದೆಂದು

ಕತ್ತಲಲ್ಲಿ ತಡಕಾಡುವಾಗ

ಅಡುಗೆ ಮನೆಯಲ್ಲಿ

ರಾತ್ರಿ ಊಟ ತಿಂದು

ಖಾಲಿ ಕೂತ

ತಟ್ಟೆಗಳೆಲ್ಲ

ಹಾರತೊಡಗಿದವು !

 (ಕನ್ನಡಪ್ರಭ  ಪತ್ರಿಕೆಯಲ್ಲಿ ಪ್ರಕಟವಾದ ಕವನ)

Advertisements

ಪುಟ್ಟ ಬೆಕ್ಕಿನ ವರಾತ.

ಹಿ೦ದಿನ ಜನ್ಮದಲ್ಲಿ ಬೆಕ್ಕು ಆಗಿರಬಹುದೇ!

ಅಡಿಗಡಿಗೂ ಹಾಲು ಕೇಳುತ್ತದೆ ಮಗು

ಸಕ್ಕರೆ ಸಾಲದೆ೦ಬ ವರಾತ,
ನಿದ್ದೆಯಲ್ಲೂ ಹಾಲಿನ ನೆನಪು

ಒ೦ದು ಥರಾ
ವಿಶಿಷ್ಟ ಬೆಕ್ಕು
ಇದು-
ಅಮ್ಮ ಇಲ್ಲದಾಗ
ಕಳ್ಳ ಹೆಜ್ಜೆ ಇಟ್ಟು
ಡಬ್ಬಗಳನ್ನು ಹುಡುಕುತ್ತದೆ;
ಅಮ್ಮ ಇಟ್ಟ ಚಾಕೊಲೇಟುಗಳನ್ನು
ಮಾಯ ಮಾಡುತ್ತದೆ.

ಈ ಬೆಕ್ಕಿಗೆ ಹಾಲಿನವಳನ್ನೇ

ಗ೦ಟು ಹಾಕಬೇಕು ಅ೦ತ-
ಯೋಚಿಸುತ್ತಾಳೆ ಅವರಮ್ಮ
’ಮದುವೆಯೇ ಆಗುವುದಿಲ್ಲ”
ಅನ್ನುತ್ತದೆ ಪುಟ್ಟಬೆಕ್ಕು

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”
ಎಲ್ಲಿಗೆ ಹೋಗಿದ್ದೆ?
ಅಮ್ಮ ಇಟ್ಟ ಹಾಲನು
ಹುಡುಕಲು ಹೋಗಿದ್ದೆ!

ನಕ್ಷತ್ರ ಪುಂಜ

ಚಿತ್ರ: ಚಂದ್ರು ಕೋಡಿ, ಕುಂದಾಪುರ

ಅವಳು
ಇಡುತ್ತಿದ್ದ
ರ೦ಗೋಲಿ ನೋಡಿ
ಬೆಳಗು ಮುನಿಸಿಕೊ೦ಡಿತು!
ಸ೦ಜೆ ಹತ್ತಿರವಾಯಿತು.


ಕ೦ತುವ ನಕ್ಷತ್ರಗಳ ನೋಡಿ
ಸೂರ್ಯ ಗಹಗಹಿಸಿದ
ಚ೦ದ್ರ ವಿಷಾದಿಸಿದ


ಮುಳುಗುವ ಸೂರ್ಯನ ನೋಡಿ
ಚ೦ದ್ರ ಓರೆಗಣ್ಣಲ್ಲಿ ನಾಚಿದ
ನಕ್ಷತ್ರಗಳು ಕಿಸಕ್ಕನೆ ನಕ್ಕವು!


ಎಲೈ ಸೂರ್ಯನೇ ಹೇಳು
ಎಲ್ಲಿ ಬಚ್ಚಿಟ್ಟಿರುವೆ ನಕ್ಷತ್ರಗಳನ್ನು?
ನನ್ನ ಮನೆಯ ಆ೦ಗಳದ
ರ೦ಗೋಲಿಯನ್ನು ಮಾತ್ರ ನೀನು ಅಳಿಸಲಾರೆ!


ಇಗೋ ನೋಡು ಸೂರ್ಯ
ನೀನೂ ಒ೦ದು ನಕ್ಷತ್ರ ಮರೆಯಬೇಡ
ನಿನ್ನ ಅವಸಾನವೂ ನನ್ನ ಹಾಗೆ!

ಚ೦ದ್ರನ ಸ್ವಾಗತಕ್ಕೆ

ನಕ್ಷತ್ರಗಳ ರ೦ಗೋಲಿ
ಸೂರ್ಯನ ಕಣ್ಣೀರು

ಸೂರ್ಯನ ಕಣ್ಣೀರಿಗೆ
ನಕ್ಷತ್ರಗಳು ಕರಗಿದವು
ಬೆಳಗಿನಲಿ ಸೂರ್ಯನದು
ಮತ್ತೆ ಅಟ್ಟಹಾಸ:
ಸೂರ್ಯನಿಗೊ೦ದು ಕಾಲ
ನಕ್ಷತ್ರಗಳಿಗೊ೦ದು ಕಾಲ

ಇಲ್ಲಿ ಕೇಳು ಮಗಳೇ
ಆಕಾಶದಲ್ಲಿ ಮಿನುಗುವ
ನಕ್ಷತ್ರಗಳೆಲ್ಲ
ನಾನಿಟ್ಟ ರ೦ಗೋಲೆಗಳೇ!

ಕೆನ್ನೆ ಭಾಷೆ

ನೀನು ನಕ್ಕಾಗ

ಕೆನ್ನೆ ಗುಳಿಗಳಿಗೆ
ಒಂದು ಮಾತು ಹೇಳಬೇಕನಿಸುತ್ತೆ:
ಇಂಥ ಚೆಂದದ ಭಾಷೆಯನ್ನು
ತಾರ್ಕಿಕವಾಗಿ ಮಂಡಿಸುವ
ನನ್ನ ಮೂರ್ಖತನಕ್ಕೆ
ನಾಚಿಕೆಯಾಗುತ್ತೆ !

ರೈತ ಮತ್ತವನ ಪದ್ಯ

ರೈತ ಪದ್ಯ ಬರೆಯಲಾರ
ನಿಜವಾದ ಕವಿ ಅವನು!
ಹುಲ್ಲ ಬಣವೆಗಳಲ್ಲಿ ನಿಂತು ಕಾತರಿಸುವ
ಮುಂದಿನ ಬೆಳೆ ಹೇಗೆ?
ಗದ್ದೆಯ ಮಡುವಲ್ಲಿ ಹೊಸ ತೆನೆ ನಕ್ಕಾಗ
ಹೊಸಪದ್ಯದಮಲಿನಲ್ಲಿ ಮೈಮರೆಯುವಂತಿಲ್ಲ
ಕೆಸರು ಗದ್ದೆಗಳಲ್ಲಿ ಪದ್ಯ ಲಾಲಿ ಹಾಡುವುದಿಲ್ಲ…