ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು (ಕೆ.ಪಿ. ಮೃತ್ಯುಂಜಯ)

ಅಷ್ಟು ಸಂತಸದ ಮುಖ; ಮುಖಸಿರಿ ಧರಿಸಿದ ಮೇಲೆ
ಪರಮ ಸಂತೋಷ.
ಕಣ್ಣು ಧರಿಸುವ ಘಳಿಗೆ ಹಿಡಿದ ಪರದೆ ;
ಪರದೆ ಮರೆಯಲಿ ಮಹಾಮಗ್ನ
ಅಯ್ಯ. ಊರ ಜನ ಇಡಿಕಿರಿದ ಕಿರಿದು ಮನೆ
ಯಲ್ಲಿ ಉಸಿರು ಬಿಗಿಹಿಡಿದ ದೊಡ್ಡ ಮೌನ.
ಇಷ್ಟಗಲ ತೇಜಃಪುಂಜ ಮುಖಸಿರಿ ಕಣ್ಣುಗಳಿಗೆ
ಕಪ್ಪಿಟ್ಟು ತಿದ್ದಿ ರಜಸ್ಸುಗೊಳಿಸಿದ ಮೇಲೆ
ದೃಷ್ಟಿಬೊಟ್ಟು ಇಟ್ಟಾಯಿತೆಂಬ ನಿರಾಳ.
ಈಗ ಮೂರ್ತಿಗೆ ಪೂರ್ತಿ ಭಾವ ;
ಭಾವಕ್ಕೆ ತಕ್ಕ ಭಂಗಿ ನೀಡಿದ ಮೇಲೆ ಸರಿವ ಪರದೆ.

ಬೆಳಕು ಹೊಳೆಯಿಸುವ ದೇವತೆ ಕಂಡು
ಮಾತು ಎಲ್ಲರ ಬಾಯಲಿ ಹಂಗೇ ಹೂತು
ಬರೇ ಮಂದನಗೆ.
ಮಣ್ಣಿನಲಿ ಅವತಾರವೆತ್ತಿದ ದೇವತೆಗೆ
ಮಹಾಮಂಗಳಾರತಿ. ಘನತೆ, ಗೌರವಾರ್ಪಣೆ
ಅಯ್ಯಂಗಾರರ ಸಮೇತ ಅಯ್ಯನಿಗೆ.

ತಲತಲಾಂತರದ ಮಣ್ಣಿನುದ್ಭವ ಮನೆ
ಯ ನಡುವಿನಂಗಳದಿಂದ ಮೇಲೆದ್ದ ದೇವತೆಗೆ
ಜನತೆ ಹರ್ಷೋದ್ಗಾರ ಚೌಡಿಕೆ ಪದ ಸಂಚಾರ ;
ಸೋಮನ ಕುಣಿತಕ್ಕೆ ಆಡಿಕೆಯ ಕಗ್ಗ ಬೇರೆ.

ಮಂಗಳಕರ ಮಾತು ಮೀರಿ ಕೇಕೆ ಶಿಳ್ಳೆ ನಗೆ
ಉನ್ಮಾದದ ಮಧ್ಯೆ ದೇವತೆ
ತಿದ್ದಿದ ಕಲಾಕಾರನೀಗ ವಿರಕ್ತನ ರೀತಿ ನಿಸ್ಸಂಗಿ.
-೨-

ಅರೆ, ತಮಟೆ, ದೋಣು ಸದ್ದಿಗೆ ಕಹಳೆ ಮೊಳಗಿ
ಗೆ ಸಣ್ಣಗೆ ಕಂಪಿಸಿದ ಎದೆಯದುಮಿ
ಕೊಂಡು ಮೂಲೆಯಲಿ ಮುದುಡಿ
ನಿಂತ ಬಾಲನ ಕಣ್ಣಾಚೆಗೆ –
ಉಯ್ಯಲಾಡುವ ದೇವತೆಗೆ ತಲೆಬಾಗಿಲಲೆ
ಕೇಕೆಯಬ್ಬರದ ನಡುವೆ ಸಣ್ಣಗೆ
ಚೀತ್ಕರಿಸಿದ ಗೊಣ್ಣೆಕುರಿ ಮಚ್ಚಿನೊಂದೇ
ಹೊಡೆತಕ್ಕೆ ಫನಾ. ರುಂಡ-ಮುಂಡಕ್ಕೆ
ಮುಗಿಬಿದ್ದ ನಮ್ಮವರು ಕದ್ದು ಮರೆ
ಯಲ್ಲಿ ಪಾಲು ಮಾಡಿಕೊಳ್ಳಲು ಪರಾರಿ
ಯಾದದ್ದಷ್ಟೇ ಗೊತ್ತು.

ಬಲಿ ಪಡೆದು ನಗು-ನಗುತ ನಡೆ ಮುಡಿ
ಮೆರವಣಿಗೆ ಹೊರಟ ದೊಡ್ಡಮ್ಮ ದೇವತೆ ಖಾಲಿ
ಮಾಡಿದ ನಡುಮನೆಯಲ್ಲಿ
ವಿರಾಮ ಕುಳಿತ ಅಯ್ಯನ ಕಣ್ಣಲ್ಲಿ
ವಿಷಾದ ಯಾಕೆ ತುಂಬಿತ್ತು?

ತಲೆ ಬಾಗಿಲಲಿ ರಕ್ತದ ಬಿಸಿ
ಆಗ ತಾನೆ ಆರತೊಡಗಿತ್ತು.

-ಕೆ.ಪಿ. ಮೃತ್ಯುಂಜಯ

(ಕೆ.ಪಿ. ಮೃತ್ಯುಂಜಯ ಅವರ ಮಹತ್ವದ ಕವಿತೆ ಇದು ಎನ್ನುವುದು ನನ್ನ ಭಾವನೆ. ಇದುವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿ ಒಳ್ಳೆಯ ಕವಿ ಎನಿಸಿಕೊಂಡಿರುವ ಮೃತ್ಯುಂಜಯ, ಈಗ ಆರನೆಯ ಸಂಕಲನದ ನಿರೀಕ್ಷೆಯಲ್ಲಿದ್ದಾರೆ.)

Advertisements