(ಹೌ)ಹಾರುವ ತಟ್ಟೆಗಳು

ಹಾರುವ ತಟ್ಟೆಯೊಂದು

ಬಿಳಿಯ ಮೋಡದೊಳಗೆ

ಮಿಂಚಂತೆ ಸೆಳೆಯುವಾಗ

ನೆನ್ನೆ ಕನವರಿಸಿದ

ಶ್ವೇತ ದೇವತೆಯೊಬ್ಬಳು

ಇಳಿದು

ಬರಬಹುದೆಂದು

ಕಾದು ಕೂತು-

ಮೋಹ ದೇವತೆ ನೀನು

ಕೈಯಲ್ಲಿ ಅಮೃತವನ್ನಿಟ್ಟುಕೊಂಡು

ಗುಟುಕೂ ಕೊಡದೆ ಮಾಯವಾದವಳು

ಮತ್ಸ ಕನ್ಯೆ ನೀನು

ನೀರಲ್ಲಿ ಗಾಳಿ ಬಲೂನು

ಹೊತ್ತು ಹೊರಟೆ

ಮೀನ

ನೀರ

ಆಳದಲ್ಲಿ

ಅಲೆಯೊಂದು

ಅಬ್ಬರಿಸಿ ನಿಂತಂತೆ

ತಿಮಿಂಗಲದ ಅಡಿಯ ನೆರಳಲ್ಲಿ

ಹೂಮರಿಗಳು

ಪಯಣ ಹೊರಟಂತೆ

ಹೊರಟಿದ್ದೆ

ಹೊತ್ತೊಯ್ದ

ಅಲೆಯೊಂದು

ದಡ ಮುಟ್ಟಿಸಿ

.. …

ಮತ್ಸ ಕನ್ಯೆ

ಮೋಹದೇವತೆ

ಬೆಳದಿಂಗಳು

ರಾತ್ರಿ ಕತ್ತಲಲ್ಲಿ

ಹಾರುವ ತಟ್ಟೆಯೊಂದಿಗೆ

ಅದೃಶ್ಯವಾದ

ದೇವತೆಯೇ

ಮೋಹಕ ಬೆಳದಿಂಗಳು

ಇತ್ತ

ಮೋಹಕತೆಯನ್ನು

ನನಗೊಂದಿಷ್ಟು

ಕೊಡೇ

ಎಂದು ರಸವಾದಿಯಂತೆ

ಹುಡುಕುತ್ತ ಹೊರಟೆ.

ಅಲ್ಲಿ ಎನೋ ಇರಬಹುದೆಂದು

ಕತ್ತಲಲ್ಲಿ ತಡಕಾಡುವಾಗ

ಅಡುಗೆ ಮನೆಯಲ್ಲಿ

ರಾತ್ರಿ ಊಟ ತಿಂದು

ಖಾಲಿ ಕೂತ

ತಟ್ಟೆಗಳೆಲ್ಲ

ಹಾರತೊಡಗಿದವು !

 (ಕನ್ನಡಪ್ರಭ  ಪತ್ರಿಕೆಯಲ್ಲಿ ಪ್ರಕಟವಾದ ಕವನ)

Advertisements