ಗುಲಾಬಿಯ ಗಿಡ

ಗುಲಾಬಿ ಗಿಡವೊಂದನ್ನು ಬೆಳೆಯುವುದೆಂದರೆ

ಸುಲಭ ಸಾಧ್ಯವಲ್ಲ ಬಿಡು.

ಅದಕ್ಕೆ ಅಣಿ ಮಾಡಿರಬೇಕು

ಫಲವತ್ತಾದ ಕರಿಕೆಂಪು ಮಿಶ್ರಿತ ಮಣ್ಣು

ಹದವಾದ ತೇವಕ್ಕೆ ಬೇಕಾದಷ್ಟು

ನೀರಿನ ಪಸೆ

ಅರೆಕೋರೆಯಾಗಿ ಬೀಳುವಂತಹ

ಗಾಢ ಬೆಳಕು, ಮಂದ್ರ ಬಿಸಿಲು

ಈಗ ನೋಡು

ಬೇರು ಇರಲೇಬೇಕೆಂದಿಲ್ಲ, ಬಲಿತ ಗಿಡದ

ಕೊಂಬೆಯಾದರೂ ಸರಿಯೇ

ಕಚ್ಚು ಕಚ್ಚಾದ ಏಟು ಬೀಳದಂತೆ

ಕೊಂಬೆ ಕತ್ತರಿಸಿ

ಗಿಡದಿಂದ ಗೇಣುದ್ದ ಓರೆಯಾಗಿ ತೆಗೆದು

ಸಿದ್ದಗೊಳಿಸಿದ ಪಾತಿಯಲ್ಲಿ ಅರ್ಧದಷ್ಟು

ಹೂತು ಬಲವಾಗಿ

ಮೇಲೆ ಕತ್ತೆತ್ತಿದ ಅದರ ತಲೆಗೆ

ಇಸ್ಶೀ ಅಂದುಕೊಳ್ಳದೆ ಸಗಣಿ ಟೊಪ್ಪಿಗೆ

ಇಟ್ಟು, ಸಿಂಪಡಿಸಿ ನೀರು ಸುತ್ತಲೂ

ಬಿಡಬೇಕು ತೆವಳಲು

ಕೆಳಗೆ ಬೇರಿಗೆ ಹಾಗೇ ಮೇಲಿನ ಚಿಗುರಿಗೆ

ಬಸಿರು ಚಿಗುರಿ ಮೊಗ್ಗು ಹೂವಾಗುವ

ಹೊತ್ತಿಗೆ ಹಾರಿ…ನೆನಪಿಡು

ಸುತ್ತಲೂ ತೇಲಿಸಬೇಕು ಬೇಲಿ

ಇಲ್ಲವಾದರೆ ನಿನ್ನ ಮರೆವಿಗೂ ಇದೆ ಮದ್ದು

ಗಿಡಕ್ಕೆ ಸ್ವತಃ ಆತ್ಮರಕ್ಷಣೆ ಗೊತ್ತುಂಟು

ಆತುರಗಾರನ ಕೈತುಂಬಾ ಚುಚ್ಚುಮುಳ್ಳು

ಗುಲಾಬಿ ಗಿಡ ಉದ್ದ..ಕ್ಕೆ ಹಬ್ಬದಂತೆ

ಆಗಾಗ ಕತ್ತರಿಸಿ ಹದ ಮಾಡಬೇಕು

ಕತ್ತರಿಸಿದ ಕಡೆಯೆಲ್ಲಾ ಮತ್ತಷ್ಟು

ಹೊಸಚಿಗುರು ಹೊಳೆದು ಗಿಡವೀಗ ಪೊದೆ

ಹೂ ಬಿಡುವ ಕಾಲಕ್ಕೋ

ಪೊದೆ ಪೂ…ರಾ ಹೂವಿನೆದೆ

ಹಾಗಾಗಿ

ಗುಲಾಬಿ ಗಿಡ ಬೆಳೆಯುವುದೆಂದರೆ

ಸುಮ್ಮನೇ ಅಲ್ಲ ನೋಡು

ಕುಸುರಿ ಕಲೆಯ ಸೂಕ್ಷ್ಮ ಧ್ಯಾನ ಗೊತ್ತಿದ್ದರೇ ಸೈ

ಅದಕ್ಕೇ ಹೇಳುತ್ತೇನೆ ಕೇಳು

ಪ್ರೇಮವೆಂದರೆ ಏನೆಂದುಕೊಂಡೆ ಗೆಳೆಯಾ?

ಬರೀ ಗುಲಾಬಿಯಾ?

ಊಹೂಂ ಇಡೀ ಗುಲಾಬಿ ಗಿಡ

 (ನನಗೆ ಇಷ್ಟವಾದ ಕೆ. ಎನ್. ಲಾವಣ್ಯ ಪ್ರಭ ಅವರ ಎರಡು ಗುಲಾಬಿಯ ಪದ್ಯಗಳು)

ಮುಳ್ಳಿನ ಗುಲಾಬಿ

ಎಷ್ಟೊಂದು ಇಷ್ಟಪಟ್ಟು ಯಾರದ್ದೋ
ಕಾಂಪೌಂಡಿನಲ್ಲಿದ್ದುದ್ದನ್ನು ಆ ಮನೆಯೊಡೆಯನ
ಬೇಡಿ ಕಾಡಿ ಒಂದಿಷ್ಟು ಕೊಂಬೆ ಕತ್ತರಿಸಿ
ತಂದು ಮನೆಯಂಗಳದ ಮಣ್ಣಿನೊಳಗೆ ನೆಟ್ಟು
ಅಕ್ಕಿ ತೊಳೆದ ನೀರು, ಸುಲಿದಿಟ್ಟ ತರಕಾರಿ ಸಿಪ್ಪೆ
ಕಪ್ಪಿನೊಳಗುಳಿದ ಚಹಾದ ಗಸಿ
ಎಲ್ಲಾ ಸುರಿಸುರಿದು ಅಂತೂ ಚಿಗುರಿದೆಲೆಗಳ
ನಡುವೆ ನಾಚಿ ಕುಳಿತಿವೆ ಮೊಗ್ಗು
ಪದರ ಪದರಗಳ ಬಿರಿದೂ ಬಿರಿಯದಂತೆ

ನೀಳತೊಟ್ಟು ಮೇಲೆ ಫ್ರಾಕು ತೊಟ್ಟ ಹಾಗೆ
ಪುಷ್ಪಪಾತ್ರೆ ನಿರಿಗೆ ಅಗಲಿಸಿದ ಕುಳಿಯೊಳಗೆ
ಮೊಗ್ಗಿನ ಮೊಟ್ಟೆ ಒಡೆದು ಒಂದೆರಡು ದಿನಗಳಲ್ಲೇ
ಅರಳುತ್ತಿದೆ ಹೂವು ನಿಧಾನಕ್ಕೆ
ಹೂವ ಚಂದಕ್ಕೆಂದೇ ಚಾಚಿಕೊಂಡಿದೆ ಸುತ್ತಲೂ
ಕಳಸಕ್ಕೆ ಜೋಡಿಸಿಟ್ಟಂತೆ ಮೂರು ಎಲೆ.
ಚಿಗುರಿದ ಹೊಸ ಗಿಡಕ್ಕೆ ಇದೀಗ ದೃಷ್ಟಿಬೊಟ್ಟು
ರಕ್ತವರ್ಣದ ಗುಲಾಬಿ ಪೂರಾ ಅರಳದೆಯೇ
ನಗುತ್ತಿದೆ ಅಥವಾ ನಕ್ಕಂತೆ ಭಾಸವಾಗುತ್ತಿದೆ.

ದಿನ ಪ್ರತಿಕ್ಷಣ ನಕ್ಕುನಕ್ಕೇ ಧ್ಯಾನಿಸುವ
ಗುಲಾಬಿ ಅಮಲಿಗೆ ರೋಸಿ ಮುಖ ತಿರುವಿ
ಅಡ್ಡಾಡಿದೆ.
ಈ ಮಾಟಗಾತಿಗೇನಾಗಿದೆಯೋ ಬೇರೆ ಇರಾದೆ?
ಸಂಶಯಕ್ಕೋ ಹೊಟ್ಟೆಕಿಚ್ಚಿಗೋ ತಲೆತುಂಬಾ
ಹುಳು ಬಿಟ್ಟುಕೊಂಡು ಸಂಶೋಧನೆಗೆ ನಿಂತಿದೆ
ಮನಸ್ಸು, ಮಿದುಳು.

ಕೊನೆಗೆ ಅದೇ ಕಣ್ಣು ಕುಕ್ಕುವ ನಗುವಿನ
ಜಾಡು ಹಿಡಿದು ಹೊರಟಂತೆಲ್ಲಾ ..
ಓಹ್, ಗುಲಾಬಿ ನಗುವಿನ ಗುಟ್ಟೀಗ ರಟ್ಟು!
ಈಗಂತೂ ನನಗೆ ಚುರು ಚೂರೇ ಕನಿಕರ
ಪಾಪ, ಗುಲಾಬಿಯದು ಅದೆಂಥಾ ಮಾಸದ ನಗೆ?
ಹಾಗೇ..
ಯಾಕೆ ನೆನಪಾಗಬೇಕೀಗ ಕ್ರಿಸ್ತ ಕ್ಷಣ ನನಗೆ ?

ದಿನ ಪ್ರತಿಕ್ಷಣ ನಕ್ಕುನಕ್ಕೇ ಧ್ಯಾನಿಸುವ
ಗುಲಾಬಿ ಅಮಲಿಗೆ ರೋಸಿ ಮುಖ ತಿರುವಿ
ಅಡ್ಡಾಡಿದೆ.
ಈ ಮಾಟಗಾತಿಗೇನಾಗಿದೆಯೋ ಬೇರೆ ಇರಾದೆ?
ಸಂಶಯಕ್ಕೋ ಹೊಟ್ಟೆಕಿಚ್ಚಿಗೋ ತಲೆತುಂಬಾ
ಹುಳು ಬಿಟ್ಟುಕೊಂಡು ಸಂಶೋಧನೆಗೆ ನಿಂತಿದೆ
ಮನಸ್ಸು, ಮಿದುಳು.

ಕೊನೆಗೆ ಅದೇ ಕಣ್ಣು ಕುಕ್ಕುವ ನಗುವಿನ
ಜಾಡು ಹಿಡಿದು ಹೊರಟಂತೆಲ್ಲಾ ..
ಓಹ್, ಗುಲಾಬಿ ನಗುವಿನ ಗುಟ್ಟೀಗ ರಟ್ಟು!
ಈಗಂತೂ ನನಗೆ ಚುರು ಚೂರೇ ಕನಿಕರ
ಪಾಪ, ಗುಲಾಬಿಯದು ಅದೆಂಥಾ ಮಾಸದ ನಗೆ?
ಹಾಗೇ..
ಯಾಕೆ ನೆನಪಾಗಬೇಕೀಗ ಕ್ರಿಸ್ತ ಕ್ಷಣ ನನಗೆ ?

-ಕೆ. ಎನ್. ಲಾವಣ್ಯ ಪ್ರಭ, ಮೈಸೂರು

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s