ಗುಲಾಬಿಯ ಗಿಡ

ಗುಲಾಬಿ ಗಿಡವೊಂದನ್ನು ಬೆಳೆಯುವುದೆಂದರೆ

ಸುಲಭ ಸಾಧ್ಯವಲ್ಲ ಬಿಡು.

ಅದಕ್ಕೆ ಅಣಿ ಮಾಡಿರಬೇಕು

ಫಲವತ್ತಾದ ಕರಿಕೆಂಪು ಮಿಶ್ರಿತ ಮಣ್ಣು

ಹದವಾದ ತೇವಕ್ಕೆ ಬೇಕಾದಷ್ಟು

ನೀರಿನ ಪಸೆ

ಅರೆಕೋರೆಯಾಗಿ ಬೀಳುವಂತಹ

ಗಾಢ ಬೆಳಕು, ಮಂದ್ರ ಬಿಸಿಲು

ಈಗ ನೋಡು

ಬೇರು ಇರಲೇಬೇಕೆಂದಿಲ್ಲ, ಬಲಿತ ಗಿಡದ

ಕೊಂಬೆಯಾದರೂ ಸರಿಯೇ

ಕಚ್ಚು ಕಚ್ಚಾದ ಏಟು ಬೀಳದಂತೆ

ಕೊಂಬೆ ಕತ್ತರಿಸಿ

ಗಿಡದಿಂದ ಗೇಣುದ್ದ ಓರೆಯಾಗಿ ತೆಗೆದು

ಸಿದ್ದಗೊಳಿಸಿದ ಪಾತಿಯಲ್ಲಿ ಅರ್ಧದಷ್ಟು

ಹೂತು ಬಲವಾಗಿ

ಮೇಲೆ ಕತ್ತೆತ್ತಿದ ಅದರ ತಲೆಗೆ

ಇಸ್ಶೀ ಅಂದುಕೊಳ್ಳದೆ ಸಗಣಿ ಟೊಪ್ಪಿಗೆ

ಇಟ್ಟು, ಸಿಂಪಡಿಸಿ ನೀರು ಸುತ್ತಲೂ

ಬಿಡಬೇಕು ತೆವಳಲು

ಕೆಳಗೆ ಬೇರಿಗೆ ಹಾಗೇ ಮೇಲಿನ ಚಿಗುರಿಗೆ

ಬಸಿರು ಚಿಗುರಿ ಮೊಗ್ಗು ಹೂವಾಗುವ

ಹೊತ್ತಿಗೆ ಹಾರಿ…ನೆನಪಿಡು

ಸುತ್ತಲೂ ತೇಲಿಸಬೇಕು ಬೇಲಿ

ಇಲ್ಲವಾದರೆ ನಿನ್ನ ಮರೆವಿಗೂ ಇದೆ ಮದ್ದು

ಗಿಡಕ್ಕೆ ಸ್ವತಃ ಆತ್ಮರಕ್ಷಣೆ ಗೊತ್ತುಂಟು

ಆತುರಗಾರನ ಕೈತುಂಬಾ ಚುಚ್ಚುಮುಳ್ಳು

ಗುಲಾಬಿ ಗಿಡ ಉದ್ದ..ಕ್ಕೆ ಹಬ್ಬದಂತೆ

ಆಗಾಗ ಕತ್ತರಿಸಿ ಹದ ಮಾಡಬೇಕು

ಕತ್ತರಿಸಿದ ಕಡೆಯೆಲ್ಲಾ ಮತ್ತಷ್ಟು

ಹೊಸಚಿಗುರು ಹೊಳೆದು ಗಿಡವೀಗ ಪೊದೆ

ಹೂ ಬಿಡುವ ಕಾಲಕ್ಕೋ

ಪೊದೆ ಪೂ…ರಾ ಹೂವಿನೆದೆ

ಹಾಗಾಗಿ

ಗುಲಾಬಿ ಗಿಡ ಬೆಳೆಯುವುದೆಂದರೆ

ಸುಮ್ಮನೇ ಅಲ್ಲ ನೋಡು

ಕುಸುರಿ ಕಲೆಯ ಸೂಕ್ಷ್ಮ ಧ್ಯಾನ ಗೊತ್ತಿದ್ದರೇ ಸೈ

ಅದಕ್ಕೇ ಹೇಳುತ್ತೇನೆ ಕೇಳು

ಪ್ರೇಮವೆಂದರೆ ಏನೆಂದುಕೊಂಡೆ ಗೆಳೆಯಾ?

ಬರೀ ಗುಲಾಬಿಯಾ?

ಊಹೂಂ ಇಡೀ ಗುಲಾಬಿ ಗಿಡ

 (ನನಗೆ ಇಷ್ಟವಾದ ಕೆ. ಎನ್. ಲಾವಣ್ಯ ಪ್ರಭ ಅವರ ಎರಡು ಗುಲಾಬಿಯ ಪದ್ಯಗಳು)

ಮುಳ್ಳಿನ ಗುಲಾಬಿ

ಎಷ್ಟೊಂದು ಇಷ್ಟಪಟ್ಟು ಯಾರದ್ದೋ
ಕಾಂಪೌಂಡಿನಲ್ಲಿದ್ದುದ್ದನ್ನು ಆ ಮನೆಯೊಡೆಯನ
ಬೇಡಿ ಕಾಡಿ ಒಂದಿಷ್ಟು ಕೊಂಬೆ ಕತ್ತರಿಸಿ
ತಂದು ಮನೆಯಂಗಳದ ಮಣ್ಣಿನೊಳಗೆ ನೆಟ್ಟು
ಅಕ್ಕಿ ತೊಳೆದ ನೀರು, ಸುಲಿದಿಟ್ಟ ತರಕಾರಿ ಸಿಪ್ಪೆ
ಕಪ್ಪಿನೊಳಗುಳಿದ ಚಹಾದ ಗಸಿ
ಎಲ್ಲಾ ಸುರಿಸುರಿದು ಅಂತೂ ಚಿಗುರಿದೆಲೆಗಳ
ನಡುವೆ ನಾಚಿ ಕುಳಿತಿವೆ ಮೊಗ್ಗು
ಪದರ ಪದರಗಳ ಬಿರಿದೂ ಬಿರಿಯದಂತೆ

ನೀಳತೊಟ್ಟು ಮೇಲೆ ಫ್ರಾಕು ತೊಟ್ಟ ಹಾಗೆ
ಪುಷ್ಪಪಾತ್ರೆ ನಿರಿಗೆ ಅಗಲಿಸಿದ ಕುಳಿಯೊಳಗೆ
ಮೊಗ್ಗಿನ ಮೊಟ್ಟೆ ಒಡೆದು ಒಂದೆರಡು ದಿನಗಳಲ್ಲೇ
ಅರಳುತ್ತಿದೆ ಹೂವು ನಿಧಾನಕ್ಕೆ
ಹೂವ ಚಂದಕ್ಕೆಂದೇ ಚಾಚಿಕೊಂಡಿದೆ ಸುತ್ತಲೂ
ಕಳಸಕ್ಕೆ ಜೋಡಿಸಿಟ್ಟಂತೆ ಮೂರು ಎಲೆ.
ಚಿಗುರಿದ ಹೊಸ ಗಿಡಕ್ಕೆ ಇದೀಗ ದೃಷ್ಟಿಬೊಟ್ಟು
ರಕ್ತವರ್ಣದ ಗುಲಾಬಿ ಪೂರಾ ಅರಳದೆಯೇ
ನಗುತ್ತಿದೆ ಅಥವಾ ನಕ್ಕಂತೆ ಭಾಸವಾಗುತ್ತಿದೆ.

ದಿನ ಪ್ರತಿಕ್ಷಣ ನಕ್ಕುನಕ್ಕೇ ಧ್ಯಾನಿಸುವ
ಗುಲಾಬಿ ಅಮಲಿಗೆ ರೋಸಿ ಮುಖ ತಿರುವಿ
ಅಡ್ಡಾಡಿದೆ.
ಈ ಮಾಟಗಾತಿಗೇನಾಗಿದೆಯೋ ಬೇರೆ ಇರಾದೆ?
ಸಂಶಯಕ್ಕೋ ಹೊಟ್ಟೆಕಿಚ್ಚಿಗೋ ತಲೆತುಂಬಾ
ಹುಳು ಬಿಟ್ಟುಕೊಂಡು ಸಂಶೋಧನೆಗೆ ನಿಂತಿದೆ
ಮನಸ್ಸು, ಮಿದುಳು.

ಕೊನೆಗೆ ಅದೇ ಕಣ್ಣು ಕುಕ್ಕುವ ನಗುವಿನ
ಜಾಡು ಹಿಡಿದು ಹೊರಟಂತೆಲ್ಲಾ ..
ಓಹ್, ಗುಲಾಬಿ ನಗುವಿನ ಗುಟ್ಟೀಗ ರಟ್ಟು!
ಈಗಂತೂ ನನಗೆ ಚುರು ಚೂರೇ ಕನಿಕರ
ಪಾಪ, ಗುಲಾಬಿಯದು ಅದೆಂಥಾ ಮಾಸದ ನಗೆ?
ಹಾಗೇ..
ಯಾಕೆ ನೆನಪಾಗಬೇಕೀಗ ಕ್ರಿಸ್ತ ಕ್ಷಣ ನನಗೆ ?

ದಿನ ಪ್ರತಿಕ್ಷಣ ನಕ್ಕುನಕ್ಕೇ ಧ್ಯಾನಿಸುವ
ಗುಲಾಬಿ ಅಮಲಿಗೆ ರೋಸಿ ಮುಖ ತಿರುವಿ
ಅಡ್ಡಾಡಿದೆ.
ಈ ಮಾಟಗಾತಿಗೇನಾಗಿದೆಯೋ ಬೇರೆ ಇರಾದೆ?
ಸಂಶಯಕ್ಕೋ ಹೊಟ್ಟೆಕಿಚ್ಚಿಗೋ ತಲೆತುಂಬಾ
ಹುಳು ಬಿಟ್ಟುಕೊಂಡು ಸಂಶೋಧನೆಗೆ ನಿಂತಿದೆ
ಮನಸ್ಸು, ಮಿದುಳು.

ಕೊನೆಗೆ ಅದೇ ಕಣ್ಣು ಕುಕ್ಕುವ ನಗುವಿನ
ಜಾಡು ಹಿಡಿದು ಹೊರಟಂತೆಲ್ಲಾ ..
ಓಹ್, ಗುಲಾಬಿ ನಗುವಿನ ಗುಟ್ಟೀಗ ರಟ್ಟು!
ಈಗಂತೂ ನನಗೆ ಚುರು ಚೂರೇ ಕನಿಕರ
ಪಾಪ, ಗುಲಾಬಿಯದು ಅದೆಂಥಾ ಮಾಸದ ನಗೆ?
ಹಾಗೇ..
ಯಾಕೆ ನೆನಪಾಗಬೇಕೀಗ ಕ್ರಿಸ್ತ ಕ್ಷಣ ನನಗೆ ?

-ಕೆ. ಎನ್. ಲಾವಣ್ಯ ಪ್ರಭ, ಮೈಸೂರು

 

 

Advertisements

ಸಮುದ್ರ ನೆನಪಿಸಿಕೊಂಡಾಗ ( ಡಾ. ವೆಂಕಟೇಶ ರಾವ್ ಕವಿತೆ)

ಮಂಡಿಯೂರಿ ಕುಳಿತಿವೆ ಸಮುದ್ರದ ಅಲೆಗಳೆಲ್ಲ

ನೀರಿನ ಗೋಡೆ ಬಿಸುಡಿದೆ ತಿಮಿಂಗಿಲವ ಹೊರಗೆ

ಸಮುದ್ರದ ಬಾಯಲ್ಲಿ ನದಿಯ ನಾಲಗೆ

ಒರಗಿದೆ ತಾಳೆಮರ ಸೂರ್ಯನ ಕಿರಣಗಳಿಗೆ

ನೊರೆಯಲ್ಲಿ ಮುಳುಗಿದ

ವಿಕಾರದ ವಕ್ರ ಮೋಡಗಳೆಲ್ಲ

ಸಹಿ ಹಾಕಿವೆ ನಿಗೂಡ ಹೆಸರುಗಳೆಲ್ಲ

ಉಸುಕಿನ ಮುಸುಕಿನಲ್ಲಿ

ಸಮುದ್ರದ ಸಮಯವಿದು

ಮಾತು ಮರೆತ ಪ್ರೇಮಿಗಳ

ಶಂಖ ಮೃದ್ವಂಗಿಗಳ

ನೆನಪಲ್ಲಿ ಅದು ಈಜಾಡುತ್ತಿದೆ

ಸಮುದ್ರದ ಶೂನ್ಯ ತುಂಬಲು

ಬಂಡೆಗಳು ಮೂಡಿವೆ

ಕಣಿವೆಯೊಳಗೆ ಓಡಾಡುತ್ತಿವೆ ಗಾಳಿ

ಖಾಲಿ ಕೈಯಲ್ಲಿ

ಉಪ್ಪು ತಿಂದ ಗಾಳಿ

ನುಂಗಿದೆ ಪದಗಳನ್ನು

ಸಣ್ಣ ಅಲೆಗಳ ಸಪ್ಪಳಕ್ಕೆ

ಎದ್ದಿದೆ ಮುಂಜಾನೆ

ಮಳೆಯ ಜೊತೆ ಬೆಟ್ಟವೂ ಇಳಿದಿದೆ

ಸಮುದ್ರಕ್ಕೆ

ಮುದಿಜೋಡಿ ನಿಂತಿದೆ ತುತ್ತತುದಿಯಲ್ಲಿ

ಮನೆಗೆ ಮರಳುವ ಯೋಚನೆಯಲ್ಲಿ

ಹುಟ್ಟುವ ಮೊದಲು ಕೇಳಿದ

ಭಾರೀ ಶಬ್ದ

ಅದು ಅಮ್ಮನ ಆಕ್ರಂದನವೇ

ದೋಣಿ ಚಿಂತಿಸುತ್ತಾ ಕುಳಿತಿದೆ

ಬೇಸಗೆಯ ತಂಗಾಳಿಗೆ

ಗಾಳಿಪಟ ಅಂಟಿಸಿದ್ದಾನೆ ಹುಡುಗ

ಅಲೆಗಳಿಗೆ ಬಲೆ ಹಾಕೋ

ಕೊಲೆಗಾರ ಚೆಲುವ

ಸುಕ್ಕು ಸುಕ್ಕು ಮುದುಕಿ ಸಮುದ್ರ

ಏನೋ ಪಿಸು ನುಡಿಯುತ್ತಿದೆ

ನಗರದ ನಾಗರೀಕರು ಶೂ ಕಳಚುತ್ತಿದ್ದಾರೆ

ಯಾರೋ ನಡೆದಂತೆ ಕೇಳುತ್ತಿದೆ

-ಡಾ. ವೆಂಕಟೇಶ ರಾವ್

 

ಪುಟ್ಟ ಬೆಕ್ಕಿನ ವರಾತ.

ಹಿ೦ದಿನ ಜನ್ಮದಲ್ಲಿ ಬೆಕ್ಕು ಆಗಿರಬಹುದೇ!

ಅಡಿಗಡಿಗೂ ಹಾಲು ಕೇಳುತ್ತದೆ ಮಗು

ಸಕ್ಕರೆ ಸಾಲದೆ೦ಬ ವರಾತ,
ನಿದ್ದೆಯಲ್ಲೂ ಹಾಲಿನ ನೆನಪು

ಒ೦ದು ಥರಾ
ವಿಶಿಷ್ಟ ಬೆಕ್ಕು
ಇದು-
ಅಮ್ಮ ಇಲ್ಲದಾಗ
ಕಳ್ಳ ಹೆಜ್ಜೆ ಇಟ್ಟು
ಡಬ್ಬಗಳನ್ನು ಹುಡುಕುತ್ತದೆ;
ಅಮ್ಮ ಇಟ್ಟ ಚಾಕೊಲೇಟುಗಳನ್ನು
ಮಾಯ ಮಾಡುತ್ತದೆ.

ಈ ಬೆಕ್ಕಿಗೆ ಹಾಲಿನವಳನ್ನೇ

ಗ೦ಟು ಹಾಕಬೇಕು ಅ೦ತ-
ಯೋಚಿಸುತ್ತಾಳೆ ಅವರಮ್ಮ
’ಮದುವೆಯೇ ಆಗುವುದಿಲ್ಲ”
ಅನ್ನುತ್ತದೆ ಪುಟ್ಟಬೆಕ್ಕು

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”
ಎಲ್ಲಿಗೆ ಹೋಗಿದ್ದೆ?
ಅಮ್ಮ ಇಟ್ಟ ಹಾಲನು
ಹುಡುಕಲು ಹೋಗಿದ್ದೆ!

ನಕ್ಷತ್ರ ಪುಂಜ

ಚಿತ್ರ: ಚಂದ್ರು ಕೋಡಿ, ಕುಂದಾಪುರ

ಅವಳು
ಇಡುತ್ತಿದ್ದ
ರ೦ಗೋಲಿ ನೋಡಿ
ಬೆಳಗು ಮುನಿಸಿಕೊ೦ಡಿತು!
ಸ೦ಜೆ ಹತ್ತಿರವಾಯಿತು.


ಕ೦ತುವ ನಕ್ಷತ್ರಗಳ ನೋಡಿ
ಸೂರ್ಯ ಗಹಗಹಿಸಿದ
ಚ೦ದ್ರ ವಿಷಾದಿಸಿದ


ಮುಳುಗುವ ಸೂರ್ಯನ ನೋಡಿ
ಚ೦ದ್ರ ಓರೆಗಣ್ಣಲ್ಲಿ ನಾಚಿದ
ನಕ್ಷತ್ರಗಳು ಕಿಸಕ್ಕನೆ ನಕ್ಕವು!


ಎಲೈ ಸೂರ್ಯನೇ ಹೇಳು
ಎಲ್ಲಿ ಬಚ್ಚಿಟ್ಟಿರುವೆ ನಕ್ಷತ್ರಗಳನ್ನು?
ನನ್ನ ಮನೆಯ ಆ೦ಗಳದ
ರ೦ಗೋಲಿಯನ್ನು ಮಾತ್ರ ನೀನು ಅಳಿಸಲಾರೆ!


ಇಗೋ ನೋಡು ಸೂರ್ಯ
ನೀನೂ ಒ೦ದು ನಕ್ಷತ್ರ ಮರೆಯಬೇಡ
ನಿನ್ನ ಅವಸಾನವೂ ನನ್ನ ಹಾಗೆ!

ಚ೦ದ್ರನ ಸ್ವಾಗತಕ್ಕೆ

ನಕ್ಷತ್ರಗಳ ರ೦ಗೋಲಿ
ಸೂರ್ಯನ ಕಣ್ಣೀರು

ಸೂರ್ಯನ ಕಣ್ಣೀರಿಗೆ
ನಕ್ಷತ್ರಗಳು ಕರಗಿದವು
ಬೆಳಗಿನಲಿ ಸೂರ್ಯನದು
ಮತ್ತೆ ಅಟ್ಟಹಾಸ:
ಸೂರ್ಯನಿಗೊ೦ದು ಕಾಲ
ನಕ್ಷತ್ರಗಳಿಗೊ೦ದು ಕಾಲ

ಇಲ್ಲಿ ಕೇಳು ಮಗಳೇ
ಆಕಾಶದಲ್ಲಿ ಮಿನುಗುವ
ನಕ್ಷತ್ರಗಳೆಲ್ಲ
ನಾನಿಟ್ಟ ರ೦ಗೋಲೆಗಳೇ!

ಕೆನ್ನೆ ಭಾಷೆ

ನೀನು ನಕ್ಕಾಗ

ಕೆನ್ನೆ ಗುಳಿಗಳಿಗೆ
ಒಂದು ಮಾತು ಹೇಳಬೇಕನಿಸುತ್ತೆ:
ಇಂಥ ಚೆಂದದ ಭಾಷೆಯನ್ನು
ತಾರ್ಕಿಕವಾಗಿ ಮಂಡಿಸುವ
ನನ್ನ ಮೂರ್ಖತನಕ್ಕೆ
ನಾಚಿಕೆಯಾಗುತ್ತೆ !