ಬಿಟ್ಟ ಸ್ಥಳಗಳನ್ನು ತುಂಬಿರಿ

ಲಿಪ್‌ಸ್ಟಿಕ್ ಗಿಡ

ಮಲೆನಾಡ ಸೆರಗಲ್ಲಿ ನಾವು ಲಿಪ್ ಸ್ಟಿಕ್ ಗಿಡದ ಕೊಂಬೆ ಬಗ್ಗಿಸಿ

ಉರುಟುರುಟಾದ ಕಾಯಿ ಕಿಸಿದು ಅದರೊಳಗೆ ಕೆಂಪಗೆ ನಗುವ
ಉರಿಬೀಜಗಳನ್ನು ಪುಟ್ಟ ಬೆರಳುಗಳಿಗೆ ಹಚ್ಚಿ ಸುಖಿಸುತ್ತಿದ್ದೆವು
ತುಟಿಗಳಿಗೆ ತಾಗಿಸಿ ಲಿಪ್‌ಸ್ಟಿಕ್ ಸವಿಯ ಉಣಿಸುತ್ತಿದ್ದೆವು
ಆ ನೆಂಟರ ಬೆಡಗಿ ಹಾಸಿಗೆಯಡಿ ಬೆಚ್ಚನೆ ಮಲಗಿದ್ದ ಲಿಪ್‌ಗ್ಲಾಸ್
ಬಗೆದು, ಹರಳೆಣ್ಣೆ ತುಂಬಿಸಿ ಮೆಲ್ಲನೆ ಮಾಯವಾದುದ್ದು
ಗುಲ್ಲೋ ಗುಲ್ಲು ಪಡ್ಡೆಗಳ ನಡುವೆ

ಆ ಬೆಡಗಿಯರ ತುಟಿಯಲ್ಲಿ ಹಚ್ಚಗೆ ನಗುತ್ತಿದ್ದ ಲಿಪ್ ಸ್ಟಿಕ್ ನೋಡೇ ನೋಡುತ್ತಿದ್ದೆವು
ಲಿಪ್ ಸ್ಟಿಕ್ ಗಿಡದ ಬೀಜಗಳನ್ನು ಹಿಡಿಯೆ ಓಡುತ್ತಿದ್ದೆವು

ಬೀಜಗಳ ಹರವಾಗಿ ಬಿಡಿಸಿ ಬೆರಳುಗಳಿಗೆ ತಾಗಿಸಿದೆವೆಂದರೆ
ಹಚ್ಚಗೆ ಕೆಂಪು ಅರಳುತ್ತಿತ್ತು ಬೆರಳ ತೆಳು ಹಾಳೆಯಲ್ಲಿ
ಸಹಜ ಬೀಜದ ಸಹಜ ಸುಖ

ರಂಗುಮಾಲಾ ರಂಗುಮಾಲಾ ಎನ್ನುತ್ತಿವೆ ಆ ಹಳೆಯ ಪುಟ್ಟ ಬೆರಳುಗಳು !

*******

ಬಕ ಧ್ಯಾನ

ಸದಾ ಒ೦ಟಿ ಕಾಲೆತ್ತಿ

ಧ್ಯಾನಕ್ಕೆ ಕೂತು ಕೂತೇ
ಮನಸ್ಸು ಚ೦ಚಲವಾಗಿ
ಕೊಕ್ಕರೆಗೆ
ಸದಾ ಮೌನ ಹೊತ್ತಿದ್ದ
ಇರುವೆ
ಮಾತು ಕಲಿಸಿತು.

ನಿಮ್ಮ ಸಿದ್ದಾ೦ತಗಳೆಲ್ಲ
ತಲೆಕೆಳಗಾಗಲಿ
ನಿಮ್ಮ ತರ್ಕಗಳೆಲ್ಲ ಕಳಚಿಕೊಳ್ಳಲಿ

ಹೀಗೆ ಸುಮ್ಮನೆ ಕೂತ ಕಣ್ಣುಗಳಲ್ಲಿ
ಕ್ರಾ೦ತಿಯಾಗಲಿ
ಇಷ್ಟು ದಿನ ಮೆರೆದ ಭ್ರಮೆಗಳೆಲ್ಲ
ಮುನಿಸಿಕೊಳ್ಳಲಿ
ಇರುವೆಗಳು ಮಾತನಾಡಲಿ.
ಹೋಗು ಮಗು
ಬೀದಿಯಲ್ಲಿ ಬಿದ್ದ ನಿನ್ನ
ಕನಸುಗಳನೆಲ್ಲಾ ಆಯ್ದು ಕೋ
ಆಗಾದರೂ ನಮಗೆ ಬುದ್ದಿ ಬರಲಿ.

*****

ಕದನ ವಿರಾಮ

ಅವನ

ಮುದ್ದು ಮುಖಕ್ಕೆ
ಮರುಳಾದವರು
ಯುದ್ದಕ್ಕೆ ಸನ್ನದ್ದರಂತೆ
ಶಸ್ತ್ರ ಕೆಳಗಿಟ್ಟು ರಾಜಿಯಾದರು

ಹಣತೆ ಹಚ್ಚುವ ಅವನ ಕಣ್ಣ ಕಾಯಕಕ್ಕೆ
ಮರುಳಾಗದ ಮಂದಿ ದೂರ ನಿಂತು
ಪಿಸುಗುಟ್ಟಿದರು ಯುದ್ದದ ಹಂಗು ತೊರೆದು
ಶರಣಾದವರಂತೆ

ಮೋಡಿ ನಗುವಿಗೆ ದಿಗಿಲು ಬಿದ್ದವರು
ಮೂಗಿನ ಮೇಲೆ ಬೆರಳಿಟ್ಟರು !

**********

ಹಸ್ತ ಲಾಘವ

ಅವರು ಸೋತ ಮುಖ ಹೊತ್ತು

ಕ್ಷಣ ನಿಲ್ಲದವರಂತೆ ಚಡಪಡಿಸಿದರು
ಅವಳೆದುರು-
ಅವಳ ಕೈ ಹಿಡಿದು ಗಂಟೆ ಗಟ್ಟಲೆ ಮಾತು
ಮುಗಿದರೂ ಉಳಿದ ದುಗುಡ
ಅವರ ಕಣ್ಣುಗಳಲ್ಲಿ ನಿಚ್ಚಳವಾಗಿತ್ತು.

ಕೈ ಬೆಚ್ಚಗಿನ ನವಿರು ಬೆಳಕಲ್ಲೂ
ಕದಲದ ಕದಪುಗಳ ಯಾಚನೆ ಯಾವುದು?

ಎಷ್ಟು ಮಾತಾಡಿದರೂ ಉಳಿಯುವ
ಮೌನವನ್ನು
ಹೆಕ್ಕಿ-
ಮುದ್ದಾಗಿ ನಕ್ಕಳು.

ಅವರು
ಗಾಳಿಯಲಿ ಹಗುರಾಗಿ ತೇಲಿದರು
ಹಗಲಿನಲಿ

ನೀರಲ್ಲಿ ಮಿಂದ ಹಕ್ಕಿಯು
ರೆಕ್ಕೆ ಬಡಿದು
ಹಾರಿ ಹೋಯಿತು,

ಅವರು ಹಕ್ಕಿಯಾದರು.

**********

ಒ೦ದು ದಿನ ಬ೦ದು ಇದ್ದು ಹೋಗಬಾರದೇ..

ನನ್ನ ಮುದ್ದು ಶಾರದೆ

’ಒಲ್ಲೆ ಒಲ್ಲೆ ಅಪ್ಪ ಅಮ್ಮನ ಕಣ್ಣು ಕಿರಿಯದಾದರೆ’

ಆಷಾಡ ಮೋಡ ಕವಿಯುತ್ತಿದೆ

ಎದೆಯೊಳಗೆ ಶ್ರಾವಣದ ನಿನಾದವೇ

ಶ್ರಾವಣ ಅದೆಷ್ಟು ದೂರ

ಒ೦ದು ದಿನ ಬರಬಾರದೇ

’ಅಕ್ಕನ ಒಡಲಲ್ಲಿ ಕ೦ದ ನಗುತ್ತಿರುವ

ಅಮ್ಮನಿಗೆ ಅಷ್ಟು ಕೆಲಸ ತೊ೦ದರೆ

ನಾನಲ್ಲಿಗೆ ಬ೦ದರೆ.’

ಕಳೆದ ದಿನ ಬರುವುದೇನೆ

ನನ್ನ ಮುದ್ದು ಶಾರದೆ

ಒಲ್ಲದ ಕೂಸು ಬಿಟ್ಟು ಬಿಡು

ನನ್ನ ಬಳಿ ಬರಬಾರದೇ

’ಒಲ್ಲೆ ಒಲ್ಲೆ ಅಪ್ಪ ಅಮ್ಮನ ಕಣ್ಣು ಕಿರಿಯದಾದರೆ’

ಆಷಾಡಗಳು ಕಳೆದವೆಷ್ಟೋ ನನ್ನ ಮುದ್ದು ಶಾರದೆ

ಹೊರಟು ನಿ೦ತೆಯಲ್ಲೆ ಮತ್ತೆ ಮತ್ತೆ ತವರಿಗೆ

’ಒಲ್ಲೆ ಒಲ್ಲೆ ಇಲ್ಲಿ ನಿ೦ತರೆ

ಕಳೆದ ಮಾವನ ನೆನಪು ಬಾರದೇ’

ಬಸವನ ಹಿ೦ದಿನ ಬಾಲ ಈಗ

ನನ್ನ ಮುದ್ದು ಶಾರದೆ

ಅದರೇನು ಮತ್ತೆ ಹೊರಟಳು ತವರಿಗೆ

ನನ್ನ ಅಪ್ಪನ ನೆನಪು ಹೊತ್ತು

ನನಗೆ ಮತ್ತೆ ಅಪ್ಪನ ನೆನಪಾಗಿದೆ!

   ********

ಸೊಡರು ಮತ್ತು ಆಧ್ಯಾತ್ಮ

ಸೂರ್ಯನಿಗೆದುರಾದ ಸೊಡರು

ಅವನ ಅಗಾಧತೆಗೆ ಬೆಚ್ಚಿತ್ತು
ಒಮ್ಮೆ ನನ್ನ೦ತೆಯೇ ಇದ್ದವನಲ್ಲವೇ ಎ೦ದು ನಕ್ಕಿತು.

ಗಾಳಿಗಭಿಮುಖವಾದ ಸೊಡರು
ಚ೦ದ್ರನಲ್ಲಿ ಇರದ
ಗಾಳಿಯ ಕುರಿತು
ಚರ್ಚೆ ನಡೆಸಿತು

ಸೊಡರಿಗೆ ಬೆಳಕು ಸ್ವ೦ತದ ಆಸ್ತಿ
ಸೂರ್ಯನ ಬೆಳಕು ಚ೦ದ್ರನ ನೆರಳು

ಸೂರ್ಯ ಉರಿಯನ್ನು ಕಕ್ಕುತ್ತಾನೆ
ಸೊಡರು ನೋಡಿ ಎಷ್ಟು ಮುದ್ದಾಗಿ ಉರಿಯುತ್ತಿದೆ!

        *******

ಪ್ರೀತಿ ಪಾತ್ರರೆಲ್ಲ ಮನೆಗೆ ಮರಳಲಿ

ಎಲ್ಲಿರುವೆಯೋ ಹುಡುಗ?

ಧಾರಾಕಾರ ಮಳೆಯಲ್ಲಿ ಎಲ್ಲಿ ನೆನೆದು ನಿಂತಿರುವೆ..
ಒಂದು ಫೋನು ಹಚ್ಚು.

ನೀನು ಹುಡುಗಿ ?
ಎಲ್ಲಿದ್ದೀಯೆ?
ಮನೆ ಸೇರಿದೆಯೇನೆ
ನನ್ನ ಮನೆಯ ಹತ್ತಿರ ಮಳೆ ಧಾರೆ ಧಾರೆ
ಬೇಗ ನಿನ್ನ ಮನೆ ಸೇರಿಕೋ

ಮಾರ್ಕೇಟಿಗೆ ಹೋದ ಅಣ್ಣ
ಇನ್ನೂ ಬಂದಿಲ್ಲ
ಇಲ್ಲೆ ಸನಿಹ ಆಟೋದ ಸದ್ದು
ಅವನೇ ಇರಬೇಕು !

ಊರಿಗೆ ಹೋದ ಚಿಕ್ಕಮ್ಮ
ಅಲ್ಲೆ ಉಳಿದಿದ್ದಾಳೆ
ಅಜ್ಜಿಯ ಮನೆಯಲ್ಲಿ
ಅವಳು ಬೆಚ್ಚಗಿದ್ದಾಳೆ ಮನೆಯೊಳಗೆ

ಅಂದು ಸಿಕ್ಕು ಸುಖ ದುಃಖ ಮಾತಾಡಿ
ಕಣ್ಣು ತುಂಬಿಕೊಂಡೆಯಲ್ಲ ಹುಡುಗಾ
ನೀನು ಹೇಗಿರುವೆಯೋ?

ನೀವಿಬ್ಬರು ಮಳೆಯಲ್ಲಿ ನೆನೆದು
ಆಟೋ ಹತ್ತಿದಿರೆಂದು ತಿಳಿಯಿತು
ಹಾಗೇ ಸುಖದಿ ಮನೆಯ ತಲುಪಿರಿ

ಮುದ್ದು ನಗೆ ನಕ್ಕು
ಪುಟು ಪುಟು ಓಡಿದೆಯಲ್ಲ ಮಗು
ನೀನು ಎಲ್ಲಿರುವೆ ?

ಕುದುರೆಗೆ ಹುಲ್ಲು ತಿನ್ನಿಸುತ್ತಾ ನಿಂತಿದ್ದ
ಜಟಕಾ ಗಾಡಿಯ ಮುದುಕ, ಅವನ ಕುದುರೆ
ಎಲ್ಲಿ ನಿಂತಿರುವುದೋ ಮಳೆಯಲ್ಲಿ ನೆನೆಯುತ್ತಾ ?

ಮೊನ್ನೆ ಊಟ ಕೇಳಲೆಂದು ಬಂದ ಮುದುಕ
ಬಸ್‌ಸ್ಟಾಪಿನ ಆಸರೆ ಪಡೆದಿರಬೇಕು..
ಶನಿವಾರದ ದೀಪ ಹಚ್ಚಲೆಂದು ಹೋದೆ
ನೀನು ಆ ಮಳೆಯಲ್ಲೆ
ದೇವರ ಗುಡಿಯಲ್ಲೆ ನಿಂತಿರುತ್ತೀ ಮಳೆಗೆ ಆಸರೆ ಪಡೆದು

ನಿಂತ ನಿಲುವಿನಲ್ಲೇ ಮನೆಯ ಬಿಟ್ಟು
ಹೋದೆಯಂತಲ್ಲ ಎಲ್ಲೋ ಸುಖವಾಗಿರುತ್ತೀ
ಅನ್ನುತ್ತಿದ್ದಾಳೆ ಆ ಅಮ್ಮ ಈ ಮಳೆಯಲ್ಲಿ

ಆ ಅಮ್ಮನಿರುವ ಮಲೆನಾಡಲ್ಲಿ
ಕೊಚ್ಚಿಹೋಗುವ ಮಳೆಯಂತೆ
ಹೇಗಿದ್ದೀಯೇ ಅಮ್ಮಾ
ಮುದ್ದಿನ ಮಗ ಕೇಳುತ್ತಿದ್ದಾನೆ ಫೋನು ಹಚ್ಚಿ

ಅವತ್ತು ಚಂದದ ನಗೆ ನಕ್ಕು
ಪರಿಚಯ ಹೇಳಿದಿರಲ್ಲ , ನೀವು ಸುರಕ್ಷಿತ
ಎಂಬ ನಂಬುಗೆ ನನಗೆ

ಎಲ್ಲೋ ಬಾಂಬಿನ ಸದ್ದು
ಎಲ್ಲೋ ಹೊಗೆಯ ಕಮಟು
ಅಪಘಾತ ಸರಣಿ ಸರಣಿ
ಬೆಂಕಿಯ ಅಲೆ ಅಲೆ
ಯಾವ ಮನೆಯ ಒಳ ಕೋಣೆಯಲ್ಲಿ
ಯಾವ ಗುಡಿ ಮಸೀದಿ ಚರ್ಚುಗಳಲ್ಲಿ
ಹೊತ್ತಿ ಉರಿಯುವುದೋ ಬೆಂಕಿ
ಹೊರಗೆ ಬನ್ನಿ ಉಸಿರು ಕಟ್ಟದಂತೆ…

ಮೊನ್ನೆ ಕಣ್ಣು ಬಿಟ್ಟ ನಾಯಿಯ ಮರಿಗಳೆ
ಅಮ್ಮನ ಕೂಡಿಕೊಳ್ಳಿ
ನನ್ನ ಮನೆಯ ಮುಂದಿನ ಚರಂಡಿಯಲ್ಲಿ
ಜಾಗ ಹುಡುಕಿಕೊಳ್ಳಿ
ಮನೆಯ ಮುಂದಿನ ಅಳಿಲುಗಳೇ
ಗೂಡು ಬಿಟ್ಟ ಹಕ್ಕಿಗಳೇ ಗೂಡು ಸೇರಿಕೊಳ್ಳಿ

ಪ್ರೀತಿ ಪಾತ್ರರೆಲ್ಲ ಸುಖದಿ ಮನೆಗೆ ಮರಳಿರಿ…

          ******

ನಗರದ ಕವಿತೆ

ಪಾಪ್ಯುಲರ್ ಆಟೋಮೊಬೈಲ್‌ನ

ಹಿ೦ಬದಿಯಲ್ಲಿ ಪುಟ್ಟ ಮೋರಿಯಿದೆ ನೋಡಿದಿರಾ

ಅದರಲ್ಲಿ ನಾವು ಕಾಗದದ ದೋಣಿ ಬಿಡುತ್ತಿದ್ದೆವು

ಸ೦ದಿಗಳಲ್ಲಿ ಚಿತ್ತಾರವನ್ನು ಹಿಡಿಯುತ್ತಿದ್ದೆವು.

ಹಾಗೇ ಒ೦ದು ಹೆಜ್ಜೆ ಮು೦ದೆ ಹೋಗಿ

ನಮ್ಮ ಮುನೀರ್‌ನ ಅ೦ಗಡಿಯಿದೆ

ಅಲ್ಲಿ ನಮ್ಮ ಲಕ್ಷ್ಮಣನಿದ್ದಾನೆ

ಎಲ್ಲೆಲ್ಲೋ ಅ೦ಡಲೆಯುತ್ತ ಇಲ್ಲಿ ಬ೦ದಿದ್ದಾನೆ

ಅವನ ಮನೆಯ ಪಕ್ಕದ ನಾಲೆಯೊ೦ದರಲ್ಲಿ ಈಜಿ

ಬಟ್ಟೆ ಒಣಗಿಸುತ್ತಿದ್ದವನು..

ದೆವ್ವ ಬ೦ದು ಹೊದಿಕೆಯನ್ನು ಎಳೆದ ಕತೆ ಪೋಣಿಸುತ್ತಿದ್ದವನು

ಮನೆಯ ಹಿ೦ಬದಿಯ ಗುಡಿಸಲಿನ ಕವುಜುಗದ ಹಕ್ಕಿಯ ಹಿಕ್ಕೆಯನ್ನು

ಬಾಯಿ ಬಿಟ್ಟುಕೊ೦ಡು ನೋಡುತ್ತಿದ್ದವರ ತಲೆಗೆ ಮೊಟುಕುವನು.

ನಾವು ಕೈ ಹಿಡಿದು ನಡೆಯುತ್ತಿದ್ದುದನ್ನು

ಪ್ರಪ೦ಚ ಗಮನಿಸಲಿಲ್ಲ

ನಮಗದರ ಅರಿವೇ ಇಲ್ಲದ೦ತೆ ನಡೆಯುತ್ತಿದ್ದೆವು

ಮಲೆನಾಡಿನ ಎಲೆಗಳ ಪರಪರ ಸದ್ದಿಲ್ಲ

ಅದಕ್ಕೆ ನಾವು ಸ್ಯಾ೦ಕಿ ಕೆರೆಗೇ ಹೋಗಬೇಕು

ರಸ್ತೆ ತಿರುವಿನಲ್ಲಿ ನಾವು ನಿ೦ತು ಬೆಪ್ಪು ಆಗಿದ್ದೇವೆ

ಆ ವಿಶಾಲ ರಸ್ತೆಯ ಮಧ್ಯೆ ಬರಬರ ಚಲಿಸುವ ಈ ವಾಹನಗಳು

ನಮಗೆ ಮರದ ಮೇಲೆ ಹರಿಯುವ ಕೊಟ್ಟೆ ಹುಳುಗಳ ಹಾಗೆ ಕ೦ಡಿವೆ!

ಎಷ್ಟೊ೦ದು ಕಾರುಗಳು ಮಗ್ಗಲು ಬದಲಾಯಿಸಿ ರೊಯ್ಯೆ೦ದು ಹೊರಟಿವೆ

ಅದೋ ವಿಮಾನ ನಮ್ಮ ನೆತ್ತಿಯನ್ನು ಕುಕ್ಕುವ೦ತೆ ಸದ್ದು ಮಾಡಿವೆ

ನನ್ನ ಮನೆಯ ಪಕ್ಕದ ಮೂರು ಚಿಕ್ಕಮನೆಗಳ೦ತಿರುವ

ಆಲಯದ ಹತ್ತಿರ ಗುಡಿಸಿಲಿನ ಹುಡುಗ

ರದ್ದಿಗೆ ಹಾಕಿದ ’ಎಲ್ಲೋ ಪೇಜಸ್’ ತಿರುವುತ್ತಿದ್ದಾನೆ,

ತಳ್ಳು ಗಾಡಿಯಲ್ಲಿ ಮೊಟ್ಟೆ ಒಡೆದು ಸ್ಪೆಷಲ್ ಆಮ್ಲೆಟ್ ಮಾಡಿ ತಿನ್ನಿಸುತ್ತಿದ್ದಾನೆ ಮತ್ತೊಬ್ಬ

ಆ ಮುದುಕ ಹೆಚ್ಚಿದ ಈರುಳ್ಳಿಯ, ಒಡೆದ ಮೊಟ್ಟೆಯ

ಪುಕ್ಕ ತರಿದ ಕೋಳಿಯ ಪುಕ್ಕಗಳ ಹಾಗೆ ಚೆಲ್ಲಾಪಿಲ್ಲಿ

ಬೀದಿಯಲ್ಲಿ ಬಿದ್ದು ನರಳುತ್ತವೆ.

ಆ ಕೋಳಿ ಅ೦ಗಡಿಯ ಕೆಲಸಗಾರ ತರಿದ

ಕೋಳಿಯ ಪುಕ್ಕಗಳನ್ನು ಮೂಗಿಗೆ ಅಡರುವ ಅದರ

ವಾಸನೆಯನ್ನು ತಡೆದುಕೊಳ್ಳಲಾಗದ ಬದುಕು

ರಸ್ತೆಯಲ್ಲಿ ನರಳುತ್ತದೆ…

ಆ ಮಾರ್ಕೆಟಿನ ಗಬ್ಬು ಗಲೀಜಿನ ನಡುವೆ ಮೂಟೆ ಹೊತ್ತ ನೀರೆಯರು,

ಹಾದಿ ಬದಿಯ ಹುಡುಗರು, ಮುದುಕರು, ಮಕ್ಕಳು

ವ್ಯಾಪಾರದ ಭರಾಟೆ ಹೊತ್ತ ಅ೦ಗಡಿಗಳು ಸದಾ ತೆರೆದೇ ಇರುತ್ತವೆ

ಯಾಕೆ ನರಳುತ್ತದೆ ಬದುಕು ಇಲ್ಲಿ

ಇದನ್ನೆಲ್ಲ ಕವಿತೆ ನರಳಿ ಉನ್ಮತ್ತವಾಗಿ

ಬೆಚ್ಚಗೆ ಮಲಗುತ್ತದೆ, ಈ ಕವಿತೆಯದು ಬದುಕಲ್ಲ!

             *******

ಮೋಹಗೊಂಡೆ

ಏಕೆಂದರೆ

ಅದು ನಿನ್ನ ಕನವರಿಸಿದ ಸರಿರಾತ್ರಿ
ನೀನು
ಸಾವಕಾಶ ನಡೆದು ಬರುವಾಗ
ದೀವಟಿಗೆಯ ಬೆಳಕು
ಓಣಿಯಲ್ಲಿ !

ದೊಂದಿ ಹಿಡಿದ ಮಂದಿ ಕಾಡಿನ ದಾರಿಯಲ್ಲಿ ನಿನ್ನ ಹಿಂದೆ
ನಡೆದು ಬರಬಹುದಿತ್ತು ಆನಭಿಷಕ್ತ ರಾಣಿಯಂತೆ
ಧರೆಯಲ್ಲಿ ಮೆರೆವ ದೇವತೆಯಂತೆ
ಗಾಂಭೀರ್ಯದ ನಗುವಿನಂತೆ, ಘನತೆವೆತ್ತ ಅಳುವಿನಂತೆ !

ಹಾಗೆ ನಾನು ನೋಡುವಾಗ, ಹತ್ತಿರ ಸುಳಿದೆ ತಂಗಾಳಿಯಂತೆ
ಮೆಲ್ಲಗೆ ಬಂದೆ ಮೋಂಬತ್ತಿಯಲ್ಲಿ ಸರಿವ ಸಾದಾ ಬೆಳಕಿನಂತೆ
ಬೆದರಿದ ಹುಲ್ಲೆಯಂತೆ ದೀವಟಿಗೆಯ ಸರಿಸಿದೆ
ಸಾವಕಾಶ

ಡೆ
ದು
ಬಂದೆ
ಕಾರ್ತೀಕದ ಬೆಳಕಿನಂತೆ

ನೀನು
ಸಾವಾಕಾಶ ನಡೆದು ಬರುವಾಗ
ದೀವಟಿಗೆಯ ಬೆಳಕು
ಓಣಿಯಲ್ಲಿ

ದೀವಟಿಗೆ ಹತ್ತುಪಟ್ಟು ಉರಿಯಿತು !!

*******

ಅ೦ಗಾರಕನಿಗೆ ನಮಸ್ಕಾರ

 

 

 

 

ಚಿತ್ರ ಕೃಪೆ: ನಾಸಾ

ಇಷ್ಟು ದಿನ ಬೆವರು ಬೇಡಿದೆಯಲ್ಲಯ್ಯ ಅ೦ಗಾರಕ
ನಿನ್ನ ಕೆ೦ಪು ಮಣ್ಣು ಕಲ್ಲು ಧೂಳು
ಅಗ್ನಿ ಪರ್ವತ ಬೆಟ್ಟಗುಡ್ದ
ಕುಳಿಮೈಯ್ಯ ರೋಮ ರೋಮಗಳ
ಮುಟ್ಟಲು ಬಿಟ್ಟುಕೊಟ್ಟೆ
ನಿನಗೆ ಶರಣು ಶರಣು

ನಿನ್ನ ನೆನಪದು ಯಾವುದೋ ಮಾಯೆಯ ಸೆಳೆತ
ಕೋಟ್ಯ೦ತರ ನಕ್ಷತ್ರ ನಿಹಾರಿಕೆಗಳನ್ನೆಲ್ಲಾ ದಾಟಿ, ನಿನ್ನ ಮೀಟಿದಕ್ಕೆ
ದೃಷ್ಟಿ ತಾಗೀತು ಜೋಕೆ ಮುಖ ಮುಚ್ಚಿಕ್ಕೋ
ನೆನ್ನೆ ರಾತ್ರಿ ಅರ್ಧ ಮುರಿದ ದೋಸೆಯ೦ತೆ ಕ೦ಗೊಳಿಸಿ
ಕೈಕೊಟ್ಟೆ ಎನ್ನುವಾಗ ಸೊಗಸಾದ ದಾರಿಬಿಟ್ಟೆ

ಕನಸಿನ ರೋವರ್ ಹತ್ತಿ ಬರುವೆ, ಕರೆದೆನ್ನ ಲಾಲಿಸು.
ಕೋಟಿ ಕೋಟಿ ಮನಸ್ಸುಗಳ ಹೊತ್ತು ಬರುವೆ, ನೀರುಣಿಸುವೆ
ನಿನ್ನದೇ ಕನವರಿಕೆ

ಇಷ್ಟು ದಿನ ಕಾಡಿಸಿದ ಅ೦ಗಾರಕನೇ ಕನಸಿಗಾದರೂ ಬಾ..

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s