ದೀಪಸಾಕ್ಷಿ

ತೊಮೆಯೆ ಎಂಬ ಶಾಲೆಯೂ, ತೊತ್ತೋ-ಚಾನ್ ಎಂಬ ಮುದ್ದು ಹುಡುಗಿಯೂ

 ಚಿತ್ರ: ಛಾಯಾ ಭಗವತಿ

ಆ ಮುನ್ನಿಗೆ, ಪುಟ್ಟಿಗೆ ಆ ದಿನ ಬೇಸರದ ಹಗಲು. ಅವಳ ಶಾಲೆ ಅವಳನ್ನು ಕೈಬಿಟ್ಟಿತ್ತು. ಅಮ್ಮನ ಕೈ ಹಿಡಿದು ನಡೆಯುತ್ತಿದ್ದ ಆ ಪುಟ್ಟಿಗೆ ಅದರ ಅರಿವೇ ಇಲ್ಲ. ಪಾಪ ಅವಳ ಅಮ್ಮನಿಗೆ ಬೇಸರ. ಅವರಿಗೆ ಅವಳ ತುಂಟಾಟ ಭಾರ (?) ಹೊರಲಾರದೆ ಶಾಲೆಯಿಂದ ಹೊರ ಹಾಕಿದ್ದರು. ಅವಳು ಮಾಡಿದ ಘೋರ ಅಪರಾಧವೆಂದರೆ: ತರಗತಿಯಲ್ಲಿ ಡೆಸ್ಕನ್ನು ತೆಗೆದು ಮುಚ್ಚುವುದು, ಬೀದಿ ಸಂಗೀತಗಾರ ಸಂಗೀತವನ್ನು ಕೇಳಲು ತರಗತಿಯ ಕಿಟಕಿಯ ಹತ್ತಿರ ನಿಲ್ಲುವುದು, ಗುಬ್ಬಚ್ಚಿಗಳ ಜೊತೆ ಮಾತುಕತೆ ಆಡಿದ್ದಕ್ಕೆ (ಇತ್ಯಾದಿ) ! ಈಗ ಅವಳ ಅಮ್ಮ ಅವಳನ್ನು ಬೇರೊಂದು ಶಾಲೆಗೆ ಸೇರಿಸಲು ಕರೆದುಕೊಂಡು ಹೋಗುತ್ತಿದ್ದಳು.

ಆಮೇಲೆ ಅವಳ ಕೈ ಹಿಡಿದದ್ದು ತೊಮೆಯೆದ ಸುಂದರ ಪರಿಸರದಲ್ಲಿದ್ದ ಆ ಶಾಲೆ. ಕೊಬಯಾಶಿಯವರ ಕನಸಿನ ನಂದನವನದಂಥ ಶಾಲೆ. “ನೀನೀಗ ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ” ಎನ್ನುತ್ತಾ ಆ ಪುಟ್ಟಿಯೆಡೆಗೆ ಅಪ್ಯಾಯತೆಯಿಂದ ಕೈಚಾಚಿದ್ದು ಆ ಶಾಲೆಯ ಮುಖೋಪಾಧ್ಯಾಯರಾದ ಕೊಬಯಾಶಿ.
ಅಲ್ಲಿಗೆ ಸೇರಿದಾಗಿನಿಂದ ಬೇರೆಯದೆ ಆದ ಲೋಕವನ್ನು ಕಂಡ ಪುಟ್ಟಿ ’ಕೆಟ್ಟ ಹುಡುಗಿ’ಯಾಗಿ ಉಳಿಯಲಿಲ್ಲ. ರೈಲು ಬಂಡಿಯಲ್ಲಿ ಪಾಠಗಳು ನಡೆಯುತ್ತಿದ್ದ ಆ ಶಾಲೆಯಲ್ಲಿ ಎಲ್ಲರು ಅವರವರಿಗೆ ಇಷ್ಟವಾದ ವಿಷಯವನ್ನು ಬೇಕಾದರು ಕಲಿಯಬಹುದಿತ್ತು. ಒಬ್ಬ ಚಿತ್ರ ಬಿಡಿಸುತ್ತಿದ್ದರೆ ಇನ್ನು ಕೆಲವರು ವ್ಯಾಯಾಮ ಮಾಡುತ್ತಿದ್ದರು. ಇನ್ನೊಬ್ಬಳು ಪುಟ್ಟಿ ಪುಸ್ತಕ ಓದಬಹುದು. ಈ ಬಗೆಯ ಕಲಿಕೆಯಿಂದ “ಉಪಾಧ್ಯಾಯರಿಗೆ ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ನಿಜವಾದ ಆಸಕ್ತಿಗಳನ್ನು ಜೊತೆಗೆ ಅವರ ಆಲೋಚನಾ ಕ್ರಮ ಹಾಗು ವ್ಯಕ್ತಿತ್ವಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಉಪಾಧ್ಯಾಯರಿಗೆ ತಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಅರ್ಥಮಾಡಿಕೊಳ್ಳಲು ಇದೊಂದು ಉತ್ತಮ ಮಾರ್ಗ” ಎನ್ನುವ ಸದ್ದುದ್ದೇಶದಿಂದ ಕೂಡಿತ್ತು. ಮಕ್ಕಳ ಮನಸ್ಸನ್ನು ಅರಿತ ಶಾಲೆ ಅದು.

ಊಟದ ಸರದಿ ಬಂದಾಗ ಅದನ್ನು ಕೂಡ ದಿನ ನಿತ್ಯದ ಕರ್ಮವೆಂಬಂತೆ ಆಗಗೊಡಲಿಲ್ಲ ಆ ಶಾಲೆಯ ಕೊಬಯಾಶಿಯವರ ಮನಸ್ಸು. ಊಟ ಮಾಡುವ ಪ್ರತಿ ಕ್ಷಣವನ್ನು ಮಕ್ಕಳು ಸಂತೋಷದಿಂದ ಅನುಭವಿಸುವಂತೆ ಏರ್ಪಡಿಸಿದ್ದರು. ಪ್ರತಿಯೊಬ್ಬ ಮಕ್ಕಳು “ಸ್ವಲ್ಪ ನೆಲದ್ದು, ಸ್ವಲ್ಪ ಜಲದ್ದು” ತರಬೇಕಾಗಿತ್ತು. (ಸಮತೋಲನ ಆಹಾರ ಸಿಗಬೇಕು ಎನ್ನುವ ಅರ್ಥದಲ್ಲಿ) ಅದರಂತೆ ಪುಟ್ಟಿಯೂ ಆ ದಿನ ಅಮ್ಮನಿಂದ ’ನೆಲದ್ದು, ಸ್ವಲ್ಪ ಜಲದ್ದು’ ಊಟ ಕಟ್ಟಿಸಿಕೊಂಡು ಹೋಗಿದ್ದಳು. ಪುಟ್ಟಿ ತಂದ ಊಟವನ್ನು ಎಲ್ಲರು ಇಷ್ಟಪಟ್ಟು ಹಂಚಿಕೊಂಡು ತಿಂದರು. ಅಮ್ಮ ರುಚಿಯಾಗಿ ಅಡುಗೆ ಮಾಡುತ್ತಾಳೆ ಎನ್ನುವುದು ಪುಟ್ಟಿಗೆ ಹೆಮ್ಮೆ. ರುಚಿಯ ತಾರತಮ್ಯ ಇಲ್ಲ ಅಲ್ಲಿ.
ಬೆಳಕು ಎಷ್ಟು ಹೊತ್ತಿಗೆ ಆಗುವುದೋ, ನಾನು ಯಾವಾಗ ಆ ಶಾಲೆಗೆ ತಲುಪುವೆನೋ ಎನ್ನುವ ಕುತೂಹಲ ಹುಟ್ಟಿಸುವ, ’ವಿಸ್ಮಯ’ದ್ದು. ಏನನ್ನು ಮಾಡಿದರು ವಿಶೇಷವೆನ್ನುವಂತೆ ರೂಪುಗೊಳಿಸುವ ಶಾಲೆ ಅದು. ತೊಮೆಯೆದ ಕ್ರೀಡಾದಿನದಂದು ಅಟಗಳಲ್ಲಿ ಗೆದ್ದವರಿಗೆ ತರಕಾರಿಗಳ ಬಹುಮಾನ. ಆಟಗಳಾದರು ಎಂಥವು, ದಿನನಿತ್ಯ ಸಿಗುವ ಸಾಮಾನುಗಳಿಂದಲೇ ರೂಪಿಸಿದ್ದ ಆಟಗಳು.
ಏನಾದರೊಂದು ಅಪಾಯ ತಂದುಕೊಳ್ಳುವುದು ತೊತ್ತೋ-ಚಾನಳಂಥ ತರಲೆ ತಿಮ್ಮಿಗೆ ಹೊಸದೇನು ಆಗಿರಲಿಲ್ಲ. ತನ್ನ ಮನೆಯ ನಾಯಿ ರಾಕಿಯೊಂದಿಗೆ ಉರುಳಾಟ, ಕಚ್ಚಾಟದ ಆಟವಾಡಲು ಹೋಗಿ ಕಿವಿ ಹರಿದುಕೊಂಡಿದ್ದಳು, ಮರಳು ಗುಪ್ಪೆಯೆಂದು ತಿಳಿದು ಜೇಡಿ ಮಣ್ಣಿನೊಳಗೆ ಎಗರಿ ಕುತ್ತಿಗೆಯವರೆಗು ಹೂತು ಹೋಗಿದ್ದವಳನ್ನು ಅಮ್ಮ ಬಂದು ಬಿಡಿಸಬೇಕಾಗಿತ್ತು. ಇನ್ನೆಂದೂ ಹಿಂದೆ ಮುಂದೆ ನೋಡದೆ ಎಲ್ಲಿಯೂ ಹಾರಕೂಡದೆಂದು ಅಮ್ಮ ತಾಕೀತು ಮಾಡಿದಳು. ಹಿಂದೊಮ್ಮೆ ರಿಪೇರಿಗೆಂದು ತೆಗೆದ ಕಕ್ಕಸ್ಸು ಗುಂಡಿಂiನ್ನು ವಾಸನೆ ಬಾರದಂತೆ ಪೇಪರು ಮುಚ್ಚಿದ್ದರಿಂದ ಅದನ್ನು ತಿಳಿಯದೆ ತೊತ್ತೋ-ಚಾನ್ ಪೇಪರಿನ ಮೇಲೆ ಜಿಗಿಯಲೆಂದು ಆ ಗುಂಡಿಗೆ ಹಾರಿದ್ದ ಪ್ರಸಂಗವಿತ್ತು! ಅದಕ್ಕೇ ಅವಳ ಅಮ್ಮ ಹಾಗೆ ಹಾರಕೂಡದೆಂದು ತಾಕೀತು ಮಾಡಿದ್ದು. ಅಮ್ಮನ ಮಾತಿಗೆ ತೊತ್ತೋ-ಚಾನ್ ಹೇಳಿದ್ದು: “ನಾನು ಪೇಪರು ಇಲ್ಲವೇ ಮರಳಿನ ಗುಪ್ಪೆಯ ಮೇಲೆ ಇನ್ನ್ನೆಂದಿಗೂ ಹಾರುವುದೇ ಇಲ್ಲ.”!!
ಚಿಕ್ಕ ಪುಟ್ಟ ಸಂತೋಷಗಳನ್ನು, ಅದರಿಂದಾಗುವ ಮಹತ್ತರ ಅನುಭವಗಳನ್ನು ಪ್ರತಿನಿಧಿಸುತ್ತಾಳೆ ತೊತ್ತೋ-ಚಾನ್. ಎಲ್ಲ ಮಕ್ಕಳಂತೆ ಮಹತ್ವದೆನ್ನಿಸುವ ಕೆಲಸ ಗಳನ್ನು ಕಂಡಾಗಲೆಲ್ಲ ತಾನು ಅದಾಗಬೇಕೆಂದು ಬಯಸುತ್ತಿದ್ದಳು. ರೇಲ್ವೆಯಲ್ಲಿ ಟಿಕೆಟ್ ಚೆಕ್ ಮಾಡುವವಳಾಗಿ, ಬೀದಿ ಸಂಗೀತಗಾರಳಾಗಿ, ಗೂಢಾಚಾರಿಣಿಯಾಗಿ, ಕೊನೆಗೆ ’ಹಂಸದ ಕೊಳ’ವೆಂಬ ಬ್ಯಾಲೆ ನೃತ್ಯದಿಂದ ಪ್ರಭಾವಿತಳಾಗಿ ನೃತ್ಯಗಾತಿಯಾಗಿ-ಹೀಗೆ ವಿವಿಧ ಅವತಾರಗಳಲ್ಲಿ ರೂಪುಗೊಳ್ಳುತ್ತಿದ್ದಳು ತೊತ್ತೋ-ಚಾನ್. “ಎಲ್ಲ ಮಕ್ಕಳಲ್ಲೂ ಜನ್ಮತಃ ಒಳ್ಳೆಯ ಸ್ವಭಾವವಿರುತ್ತದೆ. ಆದರೆ ಅವರ ಪರಿಸರ ಮತ್ತು ದೊಡ್ಡವರ ಸಲ್ಲದ ಪ್ರಭಾವದಿಂದಾಗಿ ಅದು ಬಲುಬೇಗ ನಾಶಗೊಳ್ಳುತ್ತದೆ” ಎಂಬ ನಂಬಿಕೆ ಮುಖ್ಯೋಪಾಧ್ಯಾಯರ ದಾಗಿತ್ತು. “ನೀನು ಒಳ್ಳೆಯ ಹುಡುಗಿ” ಎಂಬ ಅವರ ಮಾತು ಅವಳ ಇಡೀ ಬದುಕನ್ನು ಪ್ರಭಾವಿಸಿತ್ತು.
ನಮ್ಮೆಲ್ಲರಿಗು ಪ್ರಿಯವಾಗುವ ಮುದ್ದು ಹುಡುಗಿ ತೊತ್ತೋ-ಚಾನ್ ಜಪಾನಿನಲ್ಲಿ ಪ್ರಸಿದ್ದಿ ಪಡೆದ ಟೆಲಿವಿಷನ್ ಕಲಾವಿದೆ. ಮೂಲದಲ್ಲಿ “ತೆತ್ಸುಕೊ ಕೊರೊಯಾನಾಗಿ”- ’ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ’ ಯಾಗಿ ಪ್ರಪಂಚಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದ ಈ ಸುಂದರವಾದ ಪುಸ್ತಕವನ್ನು ನ್ಯಾಷನಲ್ ಬುಕ್‌ಟ್ರಸ್ಟ್‌ನವರ ಮೂಲಕ ವಿ. ಗಾಯತ್ರಿ ಯವರು ಕನ್ನಡಕ್ಕೆ ತಂದಿದ್ದಾರೆ.
೧೯೬೬ ರಲ್ಲಿ ಪ್ರಕಟವಾದ ಈ ಪುಸ್ತಕ ಈಗಲೂ ಅದೇ ರುಚಿಯನ್ನು ಉಳಿಸಿಕೊಂಡು ಬಂದಿದೆ. ತೊಮೆಯೆದ ಶಾಲೆಯಲ್ಲಿ ತನ್ನ ಮರೆಯಲಾರದ ವಿಶಿಷ್ಟ ಅನುಭವವನ್ನು ಒಂದು ಸ್ವಾರಸ್ಯಕರ ಕಥಾನಕವಾಗಿಸಿದ ಆ ಮುದ್ದು ಹುಡುಗಿಗೆ ಈಗ ಐವತ್ತರ ಹರೆಯ. ಆ ಶಾಲೆಯಲ್ಲಿ ಕಲಿತವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅವವರವರ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.
ಅಸಂಪ್ರದಾಯಿಕ ಶಿಕ್ಷಣದ ಮಹತ್ವವನ್ನು, ಅದರ ದುರ್ಲಭತೆಯ ಅರಿವನ್ನು ಮೂಡಿಸುವ ಈ ಪುಸ್ತಕ, ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಹುಳುಕುಗಳನ್ನು ಎತ್ತಿತೋರಿಸುತ್ತದೆ. ಸಹಜವಾಗಿ ಯೋಚಿಸುವುದನ್ನು ಕಲಿಸುವ, ಪ್ರಕೃತಿಯೊಡನೆ ಒಂದಾಗಿ ಕಲಿಯುವ ಶಿಕ್ಷಣವನ್ನು ಪ್ರತಿಪಾದಿಸುತ್ತದೆ. ಗುಜರಾತಿ ಲೇಖಕ ಗೀಜೂಬಾಯಿ ಬಧೇಕ ಅವರ ’ಹಗಲುಗನಸು’ ಪುಸ್ತಕ ಕೂಡ ಅಸಂಪ್ರದಾಯಿಕ ಶಿಕ್ಷಣದವನ್ನು ಯಶಸ್ವಿಯಾಗಿ ಪ್ರಯೋಗಿಸಿದ ಉಪಾಧ್ಯಾಯರೊಬ್ಬರ ಸ್ವಾನುಭವ. ಅದು ತೊತ್ತೋ-ಚಾನ್‌ಳ ತೊಮೆಯೆ ಶಾಲೆಯ ಮುಂದುವರಿಕೆಯ ಕಥೆಯಂತೆ ಕಾಣುತ್ತದೆ.

ಮಕ್ಕಳ ಮನಸ್ಸನ್ನು ಸಕಾರಾತ್ಮಕವಾಗಿ ಗ್ರಹಿಸಿ ಒಳ್ಳೆಯತನದ ಬೀಜ ಬಿತ್ತಿದರೆ ಎಂಥ ಮಕ್ಕಳು ಬದಲಾಗಬಲ್ಲರು ಎನ್ನುವುದಕ್ಕೆ ತೊತ್ತೋ-ಚಾನ್ ಅತ್ಯುತ್ತಮ ಉದಾಹರಣೆ. ’ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿಯ’ ಅಸೀಮ ಕುತೂಹಲ ನಮ್ಮ ಕಣ್ಣುಗಳಿಂದ ಮರೆಯಾಗುವುದೇ ಇಲ್ಲ…

(ಕನ್ನಡ ಪ್ರಭದಲ್ಲಿ ಪ್ರಕಟವಾದ  “ದೀಪಸಾಕ್ಷಿ” ಅಂಕಣ ಬರೆಹ)

ಆಹಾ!  ನೀಲಿ ಗುಲಾಬಿಯೇ

ನೀಲಿಯ ಬಣ್ಣ ಆಹ್ಲಾದಕರ, ಮನಮೋಹಕ. ಮನಸ್ಸನ್ನು ಉಲ್ಲಾಸಗೊಳಿಸುವ, ಸಮಾಧಾನಗೊಳಿಸುವ, ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಆರಾಮಗೊಳಿಸುವ, ಮಾನಸಿಕ ಭದ್ರತೆ ಮತ್ತು ವಿಶ್ವಾಸವನ್ನು ತಂದುಕೊಡುವ ಬಣ್ಣವೆಂದು ಪರಿಗಣಿಸಲಾಗಿದೆ. ವರ್ಣ ಚಿಕಿಸ್ಥೆಯಲ್ಲಿ ನೀಲಿ ಬಣ್ಣವನ್ನು ಕಡಿಮೆ ರಕ್ತ ಒತ್ತಡ ಮತ್ತು ನೋವನ್ನು ಶಮನಗೊಳಿಸಲು ಬಳಸುತ್ತಾರೆ. ಮಲಗುವ ಕೋಣೆಯಲ್ಲಿ ಕಡು ನೀಲಿಯ ಣ್ಣ ಶಾಂತರೀತಿಯಲ್ಲಿ ನಿದ್ರಿಸಲು ಮನಸ್ಸನ್ನು ಉತ್ತೇಜಿಸುತ್ತದೆ. ತಿಳಿನೀಲಿಯು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಕಛೇರಿಗಳಲ್ಲಿ ಬಳಸಲು ಶಿಫಾರಸ್ಸು ಮಾಡಲಾಗಿದೆ. ಜಾಹೀರಾತುಗಳಲ್ಲಿ ಹಳದಿ ಬಣ್ಣದ ಜೊತೆ ನೀಲಿಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ನೀಲಿ ವರ್ಣವು ಹಳದಿಯೊಂದಿಗೆ ಸೇರಿದಾಗ ಬುದ್ದಿಶಕ್ತಿಯನ್ನು ಉತ್ತೇಜಿಸುವ ಮೂಲಕ ಒಂದು ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ನೀಲಿಯ ಬಣ್ಣವನ್ನು ಇಷ್ಟಪಡುವವರ ಮೂಡ್ ಬದಲಾವಣೆಯನ್ನು ಬಯಸುತ್ತದೆ. ಭಾವುಕ ಮನಸ್ಸಿನ ಪ್ರತೀಕ ನೀಲಿ. ನೀಲಿಯನ್ನು ಇಷ್ಟಪಡುವವರಿಗೆ ಹಿತವಾದ ಸುದ್ದಿಯೊಂದು ಬಂದಿದೆ.

ಕೆಂಪು, ಹಳದಿ, ಬಿಳಿ, ಗುಲಾಬಿ ವರ್ಣದ ಗುಲಾಬಿ ನಮಗೆ ಗೊತ್ತು. ಆದರೆ  ನೀಲಿ ಗುಲಾಬಿ? ಅದೂ ಕೂಡ ಇದೀಗ ಪ್ರಪ್ರಥಮ ಬಾರಿಗೆ ಜಪಾನ್‌ನ ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ದವಾಗುತ್ತಿದೆ. ಸಧ್ಯಕ್ಕೆ ಟೋಕಿಯೋದ ಅಂತರಾಷ್ಟ್ರೀಯ ಫ್ಲವರ್ ಎಕ್ಸ್‌ಪೋ ದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮುಂದಿನ ವರ್ಷ ವಸಂತ ಮಾಸದಲ್ಲಿ ಅದು ಜಪಾನ್‌ನ ಮಾರುಕಟ್ಟೆಗೆ ಬರಲಿದೆ. ಪ್ರಾರಂಭದ ಬೆಲೆಯನ್ನಂತೂ ಕೇಳುವ ಹಾಗೇ ಇಲ್ಲ.

೨೦೦೭-೨೦೦೮ ರ ಹೊತ್ತಿಗೆ ನೀಲಿ ಗುಲಾಬಿಯ ಉತ್ಪಾದನೆಯನ್ನು ಸಿದ್ದಗೊಳಿಸುವ ಗುರಿ ಇತ್ತು. ಇದೀಗ ೨೦೦೯ರ ಕೊನೆಗೆ ಸಿದ್ದಗೊಳ್ಳುತ್ತಿದೆ. ಜಪಾನ್‌ನ ಸೆಂಟೋರಿ ಮತ್ತು ಆಸ್ಟೇಲಿಯಾದ ಫ್ಲೋರಿಜೆನ್ ಕಂಪೆನಿಗಳು ಜಂಟಿಯಾಗಿ ೧೯೯೫ ರಿಂದಲೇ ಈ ಕಾರ್ಯಕ್ಕೆ ಕೈ ಹಾಕಿದ್ದರು. ಹಲವಾರು ಸವಾಲುಗಳನ್ನು ಎದುರಿಸಿ ಗುಲಾಬಿ ಗಿಡದ ಜೀನ್ ಅನ್ನು ಬದಲಾಯಿಸಿ ಈ ಸಾಹಸಕ್ಕೆ ಇತೀಶ್ರೀ ಹಾಡಿದ್ದಾರೆ. ಹಾಗೂ ಅದನ್ನು ಸ್ವಾಭಾವಿಕವಾಗಿ ಮಣ್ಣಿನಲ್ಲಿ ಬೆಳೆಯುವ ಬಗ್ಗೆ ಇನ್ನಷ್ಟು ಪ್ರಯೋಗಗಳು ನಡೆಯಬೇಕಿದೆ. ಗುಲಾಬಿಯ ಮೂಲ ವರ್ಣದ್ರವ್ಯವನ್ನು ಬದಲಾಯಿಸಿ, ಉದಾಹರಣೆಗೆ ಅದು ಕೆಂಪು, ಬಿಳಿ ಗುಲಾಬಿಯಾದರೆ ಕ್ರಮವಾಗಿ ಕೆಂಪು, ಬಿಳಿ ವರ್ಣದ್ರವ್ಯಗಳನ್ನು ಬದಲಾಯಿಸುವುದು, ಅಂದರೆ ಅದು ಕೆಂಪು ಗುಲಾಬಿಯಾದರೆ ಕೆಂಪು ವರ್ಣದ್ರವ್ಯ ಉತ್ಪಾದಿಸುವ ಅದರ ಸಾಮರ್ಥ್ಯವನ್ನೇ ನಿಲ್ಲಿಸಿಬಿಡುವುದು. ಈಗ ಅದಕ್ಕೆ ಬೇಕಾದ ನೀಲಿವರ್ಣ ದ್ರವವನ್ನು ಎಲ್ಲಿ ತರುವುದು? ಅದಕ್ಕಾಗಿ ಫಾನ್ಸಿ ಎನ್ನುವ ಹೂವೊಂದರ ನೀಲಿ ಹೂವಿನ ವರ್ಣದ್ರವ್ಯವನ್ನು ಸೇರಿಸಲಾಯಿತು. ಅಷ್ಟೇ ಅಲ್ಲದೆ ಹೂವಿನ ವಿನ್ಯಾಸವನ್ನೂ ಬದಲಾಯಿಸಿಬಿಡುವ ಪ್ರಯೋಗಗಳು ನಡೆಯುತ್ತಿದೆ. ಉದಾಹರಣೆಗೆ, ಗುಲಾಬಿ ಹೂವಿನ ದಳಗಳು ದುಂಡಗಿನ ಆಕಾರಕ್ಕೆ ಬದಲಾಗಬಹುದು. ಈ ಸೆಂಟೊರಿ ಕಂಪೆನಿಯು ಹಳದಿ, ಮತ್ತು ಗುಲಾಬಿ ವರ್ಣದ ಹೂವುಗಳ ಮಾದರಿಯನ್ನು, ಅಲ್ಲದೆ ಕೆಲವು  ಹೂವುಗಳ ದಳಗಳನ್ನು ದುಂಡಗಿನ ಆಕಾರಕ್ಕೆ ವಿನ್ಯಾಸಗೊಳಿಸಿವೆ. ಒಟ್ಟು ಇಪ್ಪತ್ತೈದು ಹೂವಿನ ಮಾದರಿಯನ್ನು ಅದು ಸೃಷ್ಟಿಸಿದೆ.

ಇದೊಂದು ಸಾಹಸವೇನೋ ಸರಿ. ಆದರೆ ಪ್ರಯೋಗದ ಖುಷಿಯಲ್ಲಿ ಒಂದು ಗಿಡದ ಮೂಲ ವಂಶವಾಹಿಯನ್ನೇ ಬದಲಾಯಿಸಿ ಅದನ್ನು ಮಾರ್ಪಡಿಸುವ ಪ್ರಯತ್ನ ಗಿಡದ ಭಾವನೆಗಳಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆಯೂ ಪ್ರಯೋಗಗಳು ನಡೆಯಬೇಕಿದೆ !

ಅಷ್ಟೇ ಅಲ್ಲದೆ ಕೃತಕವಾಗಿ ತಯಾರಿಸಿದ ಹೂವಿಗೆ ಎಲ್ಲ ಹೈಬ್ರೀಡ್ ಗಳಲ್ಲಿ ಆಗುವಂತೆ ರೋಗನಿರೋಧಕಶಕ್ತಿ ಕಡಿಮೆಯಾಗಬಹುದು. ಬೇರೆ ಬೇರೆ ಭೌಗೋಳಿಕ ಪ್ರದೇಶಗಳಲ್ಲೂ ಅದು ಬದುಕುಳಿಯುವ ಸಾಧ್ಯತೆ ಇಲ್ಲದಿರಬಹುದು. ಮುಖ್ಯವಾಗಿ ಅದರ ಮೂಲ ಗುಣವನ್ನೇ ಕಳೆದುಕೊಂಡು ಸಹಜತೆ ನಾಶವಾಗುತ್ತದೆ. ಅದು ಗುಲಾಬಿಯೇ ಅಲ್ಲದಿರಬಹುದು.

ಗುಲಾಬಿ ಹೂವಿಗೆ ಐದು ಸಾವಿರ ವರ್ಷಗಳ ಇತಿಹಾಸವೇ ಇದೆ. ಇದುವರೆಗಿಗೂ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಗುಲಾಬಿ ಗಿಡಗಳನ್ನು ಬೆಳೆಯಲಾಗಿದೆ. ಬಿಳಿಗುಲಾಬಿಗೆ ಡೈ ಮಾಡುವ ಮೂಲಕ ಕೃತಕ ನೀಲಿಗುಲಾಬಿಗಳನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತಿತ್ತು. ೧೯೯೦ರಲ್ಲಿ ನೀಲಿವರ್ಣದ ಗುಲಾಬಿಗಳನ್ನು ತಯಾರಿಸಲಾಗಿದ್ದರೂ ಅವು ಪೂರಾ ನೀಲಿ ವರ್ಣದವುಗಳಾಗಿರಲಿಲ್ಲ. ಕೆಂಪು ವರ್ಣದ್ರವ್ಯವನ್ನು ಕುಂಟಿತಗೊಳಿಸಿ ಸೃಷ್ಟಿಸಿದ ಬೂದು ಬಣ್ಣ ಅಥವಾ ಪೇಲವ ಗುಲಾಬಿ ವರ್ಣದವಾಗಿದ್ದವು. ಇದೀಗ ನೀಲಿಯ ಸರದಿ. ಅದೂ ನೂರಕ್ಕೆ ನೂರರಷ್ಟು.

ಈ ಮುಂಚೆಯೇ ನೀಲಿಗುಲಾಬಿಯನ್ನು ಹಲವಾರು ಚಲನಚಿತ್ರಗಳಲ್ಲಿ, ವಿಡಿಯೋ ಗೇಮ್‌ಗಳಲ್ಲಿ, ಗ್ರಾಫಿಕ್ ಡಿಸೈನ್ ಗಳಲ್ಲಿ ಬಳಸಲಾಗಿದೆ. ರುಡ್‌ಯಾರ್ಡ್ ಕ್ಲಿಪಿಂಗ್‌ನ ಪದ್ಯವೊಂದರಲ್ಲೂ ಈ ನೀಲಿ ಗುಲಾಬಿಯಿದೆ. ಎಪ್ಪತ್ತರ ದಶಕದಿಂದೀಚೆಗೆ ನೀಲಿಗುಲಾಬಿಯು ಹಲವಾರು ಕಡೆ ಸಾಂಕೇತಿಕವಾಗಿ ಮತ್ತು ಹಲವಾರು ವಿನ್ಯಾಸಗಳಲ್ಲಿ ನೀಲಿಗುಲಾಬಿಯನ್ನು ಬಳಸಲಾಗುತ್ತಿತ್ತು.  ಅದೇನೆ ಇರಲಿ..

ನೀಲಿ ಬಣ್ಣ ಬಯಸುವವರ ಮೂಡ್‌ಗೆ ತಕ್ಕಂತೆ ತಿಳಿ ನೀಲಿ, ಕಡು ನೀಲಿ, ಆಕಾಶ ನೀಲಿ, ನೀಲಿ ಶಾಹಿಯ ನೀಲಿಯ- ಅವರರವರ ’ಮನೋಚಿತ್ರ’ಗಳಿಗೆ (ಫ್ಯಾಂಟಸಿ) ತಕ್ಕಂತೆ ಗುಲಾಬಿಗಳು ಮಾರುಕಟ್ಟೆಗೆ ಬಂದರೆ ಆಶ್ಚರ್ಯವಿಲ್ಲ. ಅದಕ್ಕೆ ತಕ್ಕಂತೆ ಅವರರವರ ಮನೋಚಿತ್ರಗಳು ಬದಲಾಗಲಿವೆಯೇ?

(ಕನ್ನಡ ಪ್ರಭದಲ್ಲಿ ಪ್ರಕಟವಾದ  “ದೀಪಸಾಕ್ಷಿ” ಅಂಕಣ ಬರೆಹ)

*******

ಹುಲ್ಲುಕಡ್ಡಿಯೂ ಆಸರೆ

“ಎಲ್ಲಾ ಕಷ್ಟಗಳಿಗೂ, ಸಮಸ್ಯೆಗಳಿಗೂ ಎರಡು ಔಷಧಿಗಳಿವೆ. ಒಂದು ಕಾಲ, ಮತ್ತೊಂದು ಮೌನ.”

ತರಗತಿಯಲ್ಲಿ ತಾನೇ ಮುಂದಾಗಿದ್ದ, ಪರೀಕ್ಷೆಯಲ್ಲಿ ಮಾರ್ಜಿನ್ ಅನ್ನೂ ಬಿಡದೆ ಉತ್ತರ ತುಂಬುತ್ತಿದ್ದ ಹುಡುಗಿ ಈಗ ಸಾಮಾನ್ಯ ಶಾಲೆಯೊಂದರಲ್ಲಿ ಶಿಕ್ಷಕಿ, ಕಡಿಮೆ ಸಂಬಳ ಪಡೆಯುತ್ತಿದ್ದಾಳೆ. ಶಾಲಾ ಕಾಲೇಜಿನಲ್ಲಿ ರ್ರ್ಯಾಂಕ್ ಪಡೆದು ಪತ್ರಿಕೆಗಳಲ್ಲಿ ಮಿಂಚಿದ್ದ ಮಕ್ಕಳು, ಈಗ ಹೇಳ ಹೆಸರಿಲ್ಲದಂತಾದ ಸಾಮಾನ್ಯ ಉದಾಹರಣೆಗಳಿರಬಹುದು. ಸಾಮಾನ್ಯ ಅಂಕಗಳನ್ನು ತೆಗೆದು ಸಾಮಾನ್ಯನಾಗಿಯೇ ಇದ್ದ ಮಗುವೊಂದು ಇದ್ದಕ್ಕಿದ್ದಂತೆ ಉನ್ನತಿಗೆ ಬರಬಹುದು. ಇಂಥವು ಪ್ರತಿ ನಿತ್ಯ ನಡೆಯುತ್ತಲೇ ಇರುತ್ತವೆ. ನಾವು ನಮ್ಮ ಪೂರ್ವನಿರ್ಧರಿತ ತೀರ್ಮಾನ ಗಳನ್ನು ರವಾನಿಸುತ್ತಲೇ ಇರುತ್ತೇವೆ.

ನಾವು ಒಬ್ಬ ವ್ಯಕ್ತಿಯನ್ನು ಅವನಿಂದ ಏನು ಕೆಲಸವಾಗುತ್ತದೆ ಎಂದು ಸಂದೇಹ ಪಟ್ಟು ಕಡೆಗಣಿಸಿ ನೋಡುತ್ತೇವೆ. ಆದರೆ ಅದೇ ವ್ಯಕ್ತಿಯು ಸಮಯ ಎಂದಾಗ ನಮ್ಮ ಆಸರೆಗೆ ಬಂದಿರುತ್ತಾನೆ. ಬೇರೆಯವರ ಪ್ರತಿಭೆಯನ್ನು ನಾವು ಕಡೆಗಣಿಸಿ ನೋಡುತ್ತಿರುತ್ತೇವೆ. ಅವನಿಗೇನು ಗೊತ್ತಿದೆ ಎಂದು ಕೇವಲವಾಗಿ ನೋಡುತ್ತೇವೆ. ಆದರೆ ಯಾವ ವ್ಯಕ್ತಿ ಮುಂದೆ ಏನಾಗುತ್ತಾನೆ ಎಂದು ಯಾರಿಗೆ ಗೊತ್ತು? ಏನೋ ಆಗಿ ಬಿಡುತ್ತಾರೆ ಎಂದು ಉಬ್ಬಿಸುತ್ತಿದ್ದ ವ್ಯಕ್ತಿಯೀಗ ಏನು ಪ್ರಯೋಜನವಿಲ್ಲದವನಾಗಬಹುದು. ಏನು ಅಲ್ಲದವನಂತೆ ತನ್ನ ಪಾಡಿಗೆ ತಾನು ಇದ್ದ ವ್ಯಕ್ತಿಯೊಬ್ಬ ಬಹಳ ಎತ್ತರಕ್ಕೆ ಏರಬಹುದು. ಅದನ್ನು ಒಪ್ಪಿಕೊಳ್ಳುವಲ್ಲಿಯೂ ನಮ್ಮಲ್ಲಿ ಬಹುತೇಕರು ಸಂದೇಹದಿಂದಲೇ ’ಹೇಗಿದ್ದವನು ಹೇಗಾದ ನೋಡಿ’  ಉದ್ಗಾರ ತೆಗೆಯುತ್ತೇವೆ. ಸಹಜ ಸಂತೋಷದಿಂದ ಒಪ್ಪಿಕೊಳ್ಳುವ ಮನಸ್ಸು ನಮಗಿರುವುದಿಲ್ಲ. ನಾವು ಎಷ್ಟು ಸಂದೇಹ ಪಟ್ಟರು ಆ ವ್ಯಕ್ತಿಯ ನಗುವಿನಲ್ಲಿ ಆತ್ಮವಿಶ್ವಾಸ ಮಿಂಚುವುದನ್ನು ನೋಡಬಹುದು. ಇನ್ನು ಕೆಲವರು ನಮ್ಮನ್ನು ಕೇವಲವಾಗಿ ನೋಡಿದರು ಎಂದು ಕೊರಗಬಹುದು. ಕಾಯುವಿಕೆ ಮತ್ತು ಮೌನ ಎರಡೂ ಇದ್ದರೆ ಇಂಥ ಕಡೆಗಣಿಕೆ ಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು.

ನಮಗೆ ಥಳುಕಿನ ಮೇಲೇ ಗಮನ ಹೆಚ್ಚು. ಸಾದಾ ಇರುವಂತೆ ಕಂಡರೆ ಅನುಮಾನದಿಂದಲೆ ನೋಡುತ್ತೇವೆ. ನಮ್ಮ ಇಂಥ ಕೆಟ್ಟ ಚಾಳಿಯಿಂದ ಎಷ್ಟೋ ಪ್ರತಿಭಾವಂತ ಮನಸ್ಸುಗಳು ಮುಂದೆ ಬರಲು ಹಿಂಜರಿಯುತ್ತಿವೆ, ತಮಗೆ ದೊರಕಬೇಕಾದ ಸ್ಥಾನ ದೊರಕದೆ ಕೊರಗುತ್ತಿರಬಹುದು ಅಥವ ಮುದುಡಿ ಹೋಗುತ್ತಿರಬಹುದು. ಅದೃಷ್ಟವೋ, ಪ್ರತಿಭೆಯೋ, ನಂಬಿಕೆಯಿದ್ದರೆ ದೇವರ ವರವೋ, ಕಾಲವೋ… ಎಲ್ಲೊ ಒಂದಷ್ಟು ಜನರನ್ನು ಕಾಪಾಡುತ್ತಿರುತ್ತದೆ.  ಹೀಗೆ ಎಂದು ವಿಶ್ಲೇಷಣೆ ಮಾಡುವುದು ತುಂಬಾ ಕಷ್ಟ.

ನಾವು ವ್ಯಕ್ತಿಗಳನ್ನಷ್ಟೇ ಅಲ್ಲ, ಎಲ್ಲವನ್ನು ಉದಾಸೀನತೆ ನೋಡುತ್ತಿರುತ್ತೇವೆ. ಪ್ರಕೃತಿಯನ್ನು ಉಪೇಕ್ಷಿಸಿದ್ದರ ಫಲವನ್ನು ಅನುಭವಿಸುತ್ತಿದ್ದೇವೆ. ಬೇಲಿಯ ಹೂಗಳನ್ನು ಕಡೆಗಣಿಸಿ ನೋಡುತ್ತಿರುತ್ತೇವೆ. ಆಗಲೋ, ಈಗಲೋ ಎಂದು ತೊನೆದಾಡುತ್ತಿದ್ದ ಪುಟ್ಟ ಸಸ್ಯವೊಂದು ಮಾರನೆಯ ದಿನ ಕಂಗೊಳಿಸುತ್ತಿರು ವುದನ್ನು ನೋಡುತ್ತೇವೆ. ಮಾಸಲು ಚಡ್ಡಿ, ಹರಿದ ಬನಿಯನ್ ತೊಟ್ಟ ಬಾಲಕ ನೋಡನೋಡುತ್ತಿದ್ದಂತೆ ಪ್ರತಿಭಾವಂತನಾಗಿ ಬೆಳೆದು ಬಿಡಬಹುದು. ಕೊಳಗೇರಿಯ ಹುಡುಗನೊಬ್ಬ ಎಲ್ಲರ ಕಣ್ಣು ಕುಕ್ಕುವ ಹಾಗೆ ರಾಷ್ಟ್ರಮಟ್ಟದ ಕ್ರಿಕೆಟ್ ಪಟುವಾಗಿ ಮಿಂಚಿದ್ದನ್ನು ನಾವು ನೋಡಿದ್ದೇವೆ.

ನಮ್ಮ ಸಾಹಿತ್ಯ ವಲಯದಲ್ಲಿಯು ಕೂಡ ಈ ತರಹದ ಉಪೇಕ್ಷಿಸುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಒಂದು ಕಾಲದಲ್ಲಿ ಯಾರು ಗುರುತಿಸಿದ  ಕೃತಿಯೊಂದು  ಇದ್ದಕ್ಕಿದ್ದಂತೆ ಮಿಂಚಬಹುದು. ಯಾರಿಗೊ ಯಾವಗಲೊ ಸಿಗಬೇಕಾದ ಮನ್ನಣೆ ಯಾವಾಗಲೋ ಸಿಗಬಹುದು, ಅಥವ ಸಿಗದೆಯೇ ಹೋಗಬಹುದು. ಯಾರ ಗಮನಕ್ಕೂ ಬಾರದ ಕೆಲವರ ವಿಚಾರಗಳು ಇದ್ದಕ್ಕಿದ್ದಂತೆ ಮಹತ್ವ ಪಡೆಯಬಹುದು.

ಸಿನೆಮಾ ರಂಗದಲ್ಲಿ ನಟನೆಯೆ ಗಂಧವೇ ಗೊತ್ತಿಲ್ಲದವರು ಮಿಂಚಬಹುದು. ಅರ್ಹನಾದ ವ್ಯಕ್ತಿ ಹಿನ್ನೆಲೆಗೆ ಸರಿಯಬಹುದು. ಅತ್ಯುತ್ತಮ ಸಿನೆಮಾವೊಂದು ಏನು ಅಲ್ಲದ ಹಾಗೆ ಪ್ರತಿಕ್ರಿಯೆಯನ್ನು ಎದುರಿಸಬಹುದು. ಕಳಪೆ ಚಿತ್ರವೊಂದು ಇನ್ನಿಲ್ಲದಂತೆ ಮಿಂಚಬಹುದು. ಹೊಸ ಮುಖವೊಂದು ಚಿತ್ರರಂಗದಲ್ಲಿ ಕಾಣಿಸಿಕೊಂಡಾಗ ಬಹುತೇಕ ಅವರನ್ನು ಏನು ಸಾಧಿಸಿಯಾರು ಎಂದು ಕೇವಲವಾಗಿ ನೋಡುವವರೆ. ಅವರು ಪ್ರಸಿದ್ದರಾಗುವ ಕೊನೆಯ ಕ್ಷಣದವರೆಗು ಅವರನ್ನು ಟೀಕಿಸುವವರೆ.  ಆದರೆ,  ಆ ಚಿತ್ರ ಹಿಟ್ ಆದಾಗ ಎಲ್ಲರೂ ಅವರನ್ನು ಹಾಡಿಹೊಗಳುವವರೇ..

ನಮ್ಮ ನಮ್ಮ ಮನೆಗಳಲ್ಲೆ ಮಕ್ಕಳಲ್ಲಿನ ಇಂತವುಗಳ ವ್ಯತ್ಯಾಸ ಗೊತ್ತಾಗುತ್ತದೆ. ನಮ್ಮ ಮಗ ಅಥವ ಮಗಳು ಮನೆಯ ಉಳಿದ ಮಕ್ಕಳಿಗಿಂತ ಹೇಗೆ ಇದ್ದಕ್ಕಿಂದಂತೆ ಬೆಳೆದು ಬಿಡುತ್ತವೆ ಎನ್ನುವುದನ್ನು ಎಷ್ಟೋ ಜನ ತಂದೆ ತಾಯಂದಿರು ಜ್ಞಾಪಿಸಿಕೊಳ್ಳುತ್ತಿರುತ್ತಾರೆ. ತನ್ನ ಮಗಳಿಗೊಂದು ಡಿಗ್ರಿ ಕೊಡಿಸಿ ಮದುವೆ ಮಾಡುವ, ಅವಳೇನು ಸಾಧಿಸಿಯಾಳು ಅಂದುಕೊಂಡ ತಂದೆ ತಾಯಂದಿರು ಅವಳೊಬ್ಬ ಕಲಾವಿದೆಯಾಗಿಯೋ, ವಿಜ್ಞಾನಿಯಾಗಿಯೋ, ಉತ್ತಮ ಆಟಗಾರ್ತಿಯಾಗಿಯೋ ಬೆಳೆದು ಬಿಟ್ಟಾಗ; ನಾಲ್ಕೈದು ವರ್ಷ ಕೆಲಸವಿಲ್ಲದೆ ಅಲೆದು ಯಾವುದೋ ಒಂದು ವೃತ್ತಿ ಹಿಡಿದು ಸಾಮಾನ್ಯನಂತೆ ಬದುಕುತ್ತಿದ್ದ ಮಗನೊಬ್ಬ ಉನ್ನತ ಹುದ್ದೆ ಹಿಡಿದು ಅಥವ ಇತರೆ ಕಾರಣಗಳಿಂದಾಗಿ ಪ್ರಸಿದ್ದನಾಗಿಬಿಟ್ಟಾಗ-ತಾವು ಇದನ್ನೆಲ್ಲ ನಿರೀಕ್ಷಿಸಿಯೇ ಇರಲಿಲ್ಲ ಎನ್ನುತ್ತಾರೆ. ಯಾವುದೊ ಕಾರಣಗಳು ಮಿಂಚಿ ಮರೆಯಾಗುತ್ತಿರುತ್ತವೆ.

ಸಾಮಾನ್ಯವಾಗಿ ಗಂಡ ಹೆಂಡತಿಯನ್ನೋ, ಹೆಂಡತಿ ಗಂಡನನ್ನೋ ಹಲವಾರು ವಿಚಾರಗಳಲ್ಲಿ ಕೇವಲವಾಗಿ ನೋಡುತ್ತಲೇ ಇರುತ್ತಾರೆ. ಹಲವು ಗಂಡಂದಿರು  ಹೆಂಡತಿಯರನ್ನು ’ನಿನ್ನ ಕೈಲೇನಾಗುತ್ತದೆ’ ಎನ್ನುತ್ತಲೇ ಇರುತ್ತಾರೆ. ಹೆಂಡಂದಿರು ’ನಿಮುಗೆ ಏನೂ ಸಾಧಿಸಲು ಆಗುವುದಿಲ್ಲ. ಜೀವನದುದ್ದಕ್ಕು ಹೀಗೇ ಇರುತ್ತೀರಿ’ ಎಂದು ಗೊಣಗಾಡುತ್ತಲೇ ಇರಬಹುದು. ಯಾವಾಗಲು ಅನೋನ್ಯತೆಯಿಂದ ನಲಿಯುತ್ತಿದ್ದ ದಂಪತಿಗಳು ಇದ್ದಕ್ಕಿದ್ದಂತೆ ಬೇರೆಯಾಗಬಹುದು. ಆಗ್ಗಾಗ್ಗೆ ಕಚ್ಚಾಡುತ್ತಲೆ ಇದ್ದ ಗಂಡ-ಹೆಂಡಿರು ಧಿಡೀರನೆ ಒಬ್ಬರನೊಬ್ಬರು ಬಿಟ್ಟಿರಲಾಗದಷ್ಟು ಮಾದರಿ ವ್ಯಕ್ತಿಗಳಾಗಬಹುದು. ಆಫೀಸಿನಲ್ಲಿ ಬಾಸ್ ಕೈಕೆಳಗಿನವರನ್ನು ಕೇವಲವಾಗಿ ಕಾಣುತ್ತಿರಬಹುದು. ಅಥವ ಬಾಸ್ ಕೈಕೆಳಗೆ ಕೆಲಸ ಮಾಡುತ್ತಿರುವವರು ಬಾಸ್‌ನ ಸರಳತೆಯನ್ನು ದೌರ್ಬಲ್ಯವೆಂದು ಭಾವಿಸಬಹುದು. ಹೀಗೆ ಅರ್ಹತೆಯನ್ನು ಹೀಗಳೆಯುವುದು, ಅನರ್ಹತೆಯನ್ನು ಎತ್ತಿಹಿಡಿಯುವ ಕೆಲಸ ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ.

ಕಲಾವಿದನ ಕಲಾಕೃತಿಯೊಂದು ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರಬಹುದು. ತನ್ನ ಜೀವಿತದಲ್ಲಿ ಅನಾಮಿಕನಾಗಿ ಬದುಕಿದ ಕಲಾವಿದ ವ್ಯಾನ್‌ಗೊ ಅವನು ತೀರಿಕೊಂಡ ಮೇಲೆ ಬಹಳ ಪ್ರಸಿದ್ದನಾದ. ಇಟಲಿಯ ಕಲಾವಿದ ಲಿಯೊನಾರ್ಡೊ ಡಾ ವಿಂಚಿಯ ’ಮೊನಲಿಸಾ’ ಹಲವಾರು ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಸಿದ್ದಳಾಗುತ್ತಿದ್ದಾಳೆ.  ಇಂಥ ಹಲವಾರು ಪ್ರತಿಭೆಗಳಿಗೆ ಯಾವ ಕಾರಣಕ್ಕೆ ಪ್ರಸಿದ್ದಿ ತಡೆ ಹಿಡಿಯಿತೋ? ಂheಚಿಜ oಜಿ ಣime ಎನ್ನುವ ಹಾಗೆ ಅದರ ಮಹತ್ವ ಆಗ ಆರ್ಥವಾಗಲಿಲ್ಲವೊ? ಕಲಾವಿದ ಮೂರ್ತಿಯವರು ಹೇಳುವ ಹಾಗೆ ಅವರೆಲ್ಲ ’ಮಂದಗಾಮಿ’ಗಳೋ? ಎಲ್ಲದಕ್ಕು ಕಾಲ ಬರಬೇಕು ಎನ್ನುವುದು ಇಂಥವಕ್ಕೆ ಹೆಚ್ಚು ಅನ್ವಯಿಸುವುದು.

ಒಬ್ಬ ವ್ಯಕ್ತಿ ಅಂದಾಕ್ಷಣ ಒಂದು ಪೂರ್ವ ಪರಿಕಲ್ಪನೆ ಇಟ್ಟುಕೊಂಡಾಗ ಹೀಗಾಗುವುದು ಸಾಮಾನ್ಯ. ಒಬ್ಬ ವ್ಯಕ್ತಿಂiiನ್ನು ನಿರ್ದಿಷ್ಟವಾಗಿ ನೋಡದ ಹೊರತು ನಿರ್ಲಕ್ಷಕ್ಕೊಳಪಡಿಸುವುದು ತಪ್ಪು ಎನಿಸುತ್ತದೆ. ಇದಕ್ಕೆ ಲ್ಲ ಮೂಲ ಕಾರಣ, ಮಾನಸಿಕ ಹಿನ್ನೆಲೆ ಏನಿರಬಹುದು ಎಂದು ಯೋಚಿಸುವಾಗ, ಕೆಲವರು ಆ ಕ್ಷಣಕ್ಕೆ ಹಾಗೆ ಮಾಡಬಹುದು. ಆದರೆ, ಕೆಲವರು ಯಾವಾಗಲು ಹಾಗೆಯೇ ಇರುತ್ತಾರೆ. ತಮಗೆ ತೋಚಿದ ನಿರ್ಣಯಗಳನ್ನು ಪಾಸು ಮಾಡುತ್ತಿರುತ್ತಾರೆ. ಇವೆಲ್ಲವು ವ್ಯಕ್ತಿತ್ವ ದೋಷವೋ, ಆ ವ್ಯಕ್ತಿಗಳ ಬಗೆಗಿನ ಪ್ರೀತಿಯ ಕೊರತೆಯೋ  ಅರ್ಥವಾಗುವುದು ಕಷ್ಟ. ಎಲ್ಲವು, ಎಲ್ಲರೂ ಕಾಲನ ಪರೀಕ್ಷೆಗೆ ಒಳಪಡಲೇಬೇಕು. ಇದರ ಮಧ್ಯೆ ನಮ್ಮ ನಿರೀಕ್ಷೆಗಳು, ನಮ್ಮ ನಮ್ಮ ಸ್ವಯಂ ನಿರ್ಧಾರಗಳು ಯಾವ ಲೆಕ್ಕ?

ಯಾವುದೇ ಒಂದು ಸಾಧನೆಗೆ ಸಮಯ ಅನ್ನುವುದು ಇದ್ದೇ ಇರುತ್ತದೆ. ಅಷ್ಟರೊಳಗೆ ಅವರನ್ನು ಕೇವಲವಾಗಿ ನೋಡುವುದು, ಇವನ ಕೈಲಾಗುವುದಿಲ್ಲ ಎಂದು ಸ್ವಯಂ ತೀರ್ಮಾನಗಳಿಗೆ ಬರುವುದು ನಡೆಯುತ್ತಲೇ ಇರುತ್ತದೆ. ನಮಗೆ ಒಬ್ಬ ವ್ಯಕ್ತಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಆತನ ವ್ಯಕ್ತಿತ್ವವನ್ನು ಅಪಮೌಲ್ಯ ಗೊಳಿಸುವುದಕ್ಕಿಂತ ಮೌನವಾಗಿರುವುದೊಳಿತು.

ಯಾರೋ ಒಬ್ಬರು ನಮಗೆ ಅರ್ಥವಾಗಿರದ ಕಾರಣಕ್ಕೆ, ಅವರ ವಿಚಾರಗಳು ನಮಗೆ ಅರಿವಿಗೆ ಬಾರದ ಮಾತ್ರಕ್ಕೆ ನಾವು ಯಾರನ್ನೇ ಆಗಲಿ ಕಡೆಗಣಿಸಿ ನೋಡಲಿಕ್ಕಾಗದು. ಅಂಥ ಮನಸ್ಸುಗಳಲ್ಲಿ, ಸುಪ್ತಪ್ರಜ್ಞೆಯಲ್ಲಿ ಎಂಥ ವಿಚಾರಗಳು ಅಡಗಿವೆಯೋ ಯಾರಿಗೆ ಗೊತ್ತು? ಅದನ್ನು ಗುರುತಿಸದಿರುವುದು ನiಗೇ ಕೊರತೆ… ಎಷ್ಟೋ ವಿಜ್ಞಾನಿಗಳ ಸಂಶೋಧನೆಗಳು ಆಯಾ ಕಾಲಕ್ಕೆ ಸಮ್ಮತವಾಗದೆ ಅವರೆಲ್ಲ ತೀರಿಕೊಂಡ ಮೇಲೆ ಮಹತ್ವವನ್ನು ಪಡೆದಿವೆ. ನಮ್ಮ ನಾಡಿನ ಪ್ರತಿಭಾವಂತ ಸಸ್ಯ ವಿಜ್ಞಾನಿ ಜಗದೀಶ ಚಂದ್ರ ಬೋಸರನ್ನು ಬದುಕ್ಕಿದ್ದಾಗ ಮಹತ್ವ ದಕ್ಕಲೇ ಇಲ್ಲ. ಪ್ರಸಿದ್ದ ವಿಜ್ಞಾನಿಗಳು ತಮ್ಮಂತೆ ಇತರೆ ವಿಜ್ಞಾನಿಗಳ ವಾದಗಳನ್ನು ಟೀಕಿಸುತ್ತಲೇ ಇರುತ್ತಾರೆ. ಭಾರತೀಯ ಸಂಜಾತ ’ಚಂದ್ರಶೇಖರ್ ಮಿತಿ’ಯ ಖ್ಯಾತಿಯ ಖಗೋಳ ವಿಜ್ಞಾನಿ ಎಸ್. ಚಂದ್ರಶೇಖರ್ ಅವರ ಸಂಶೋಧನೆಗಳ ಬಗ್ಗೆ, ಅಮೆರಿಕದ ಖಭೌತವಿಜ್ಞಾನಿ ಎಡ್ಡಿಂಗ್‌ಟನ್ ಜೀವನದುದ್ದಕ್ಕೂ ಅವಹೇಳನ ಮಾಡುತ್ತಲೇ ಬಂದರು. ಅಮೆರಿಕದ ಇನ್ನೊಬ್ಬ ಪ್ರಸಿದ್ದ ಭೌತಶಾಸ್ತ್ರಜ್ಞ, ’ಅನಿಶ್ಚಿತತೆಯ ತತ್ವ’ ದಿಂದ ಪ್ರಸಿದ್ದವಾದ ರಾಬರ್ಟ್ ಆಪನ್ ಹೈಮರ್ ಇಂಥದ್ದೇ ಟೀಕೆಗೆ ಒಳಗಾಗುತ್ತಲೆ ಬಂದರು.

ಒಬ್ಬ ವ್ಯಕ್ತಿಯನ್ನು ಯಾವ್ಯಾವುದೋ ಸಣ್ಣ ಕಾರಣಗಳಿಗಾಗಿ ಆಡಿಕೊಳ್ಳುತ್ತೇವೆ. ಅವನೊಳಗೆ ಅದ್ಯಾವ ಶಕ್ತಿ ಹುದುಗಿದೆಯೊ ಎಂದು ಯಾರಿಗೆ ಗೊತ್ತಿರುತ್ತದೆ. ಸರಿಯಾಗಿ ಗೊತ್ತು ಮಾಡಿಕೊಂಡ ನಂತರವೇ ಒಂದು ತೀರ್ಮಾನಕ್ಕೆ ಬರುವುದುದೊಳಿತು. ನಾವು ನಿಜಕ್ಕೂ ಪ್ರಜ್ಞಾವಂತರಾಗಿದ್ದರೆ. ಒಬ್ಬನ ವ್ಯಕ್ತಿತ್ವದ ಬಗ್ಗೆ ಆಷ್ಟು ಭರವಸೆ ಇರದಿದ್ದಾಗಲು ಆತನ ಬಗ್ಗೆ ಎಂಥದೊ ವಿಶ್ವಾಸ ಇರಬೇಕಾಗುತ್ತದೆ. ಮುಂದೆ ಅವನು ನಮ್ಮ ವಿಶ್ವಾಸವನ್ನು ದೃಢಪಡಿಸುತ್ತಾನೆ ಎಂದು ಯಾರಿಗೆ ಗೊತ್ತಿರುತ್ತದೆ?  ಅಷ್ಟಕ್ಕೂ ನಮ್ಮಲ್ಲಿಯೇ ಅತಿ ವಿಶ್ವಾಸ ಇರುವ ನಾವು ಅಂದು ಕೊಂಡ ಮಟ್ಟಕ್ಕೆ ಏರುತ್ತೇವೆ ಅನ್ನುವುದೂ ನಮಗೆ ಗೊತ್ತಿರುತ್ತದೆಯೇ!?

ಈ ಸಂದರ್ಭದಲ್ಲಿ ಕತೆಯೊಂದು ನೆನಪಾಗುತ್ತಿದೆ: (ಇದೊಂದು ದುಷ್ಟಾಂತವೋ, ಘಟನೆಯೋ ನೆನಪಾಗುತ್ತಿಲ್ಲ) ನಾಲ್ವರು ಸ್ನೇಹಿತರಲ್ಲಿ ಒಬ್ಬನಿಗೆ ಹಣದ ಕೊರತೆಯಾಗಿ ಸಾಲ ಕೇಳುವ ಪ್ರಸಂಗ. ಅವನಿಗೆ ಉಳಿದ ಇಬ್ಬರಲ್ಲಿ ಭರವಸೆ ಅವರಲ್ಲಿ ಯಾರಾದರು ಕೊಟ್ಟೇ ಕೊಡುತ್ತಾರೆ ಎನ್ನುವುದು. ಆದರೆ ಅವನ ನಿರೀಕ್ಷೆ ಹುಸಿಯಾಗುವಂತೆ ಆತ ಕಡೆಗಣಿಸಿದ ಮೂರನೆಯವ ಇವನಿಗೆ ಸಹಾಯಕ್ಕೆ ಒದಗುತ್ತಾನೆ. ನೀರಿನಲ್ಲಿ ಮುಳುಗುವಾಗ ಹುಲ್ಲುಕಡ್ಡಿಯೊಂದು ಆಸರೆ ಯಾಗುವುದೆಂದು ಯಾರಿಗೆ ತಿಳಿದಿರುತ್ತದೆ?

(ಕನ್ನಡ ಪ್ರಭದಲ್ಲಿ ಪ್ರಕಟವಾದ  “ದೀಪಸಾಕ್ಷಿ” ಅಂಕಣ ಬರೆಹ)

   *******

  ಮೋಹದ  ಕನ್ನಡಿಯೇ 

‘ಕನ್ನಡಿಯನ್ನು ನೋಡಿ. ಅದು ಏನನ್ನೂ ಸ್ವೀಕರಿಸುವುದಿಲ್ಲ, ಏನನ್ನೂ ತಿರಸ್ಕರಿಸುವುದೂ ಇಲ್ಲ. ಅದು ಏನಿದ್ದರೂ ಗ್ರಹಿಸುತ್ತದೆ.”

– ಜೆನ್ ಗುರು ಚು ಆಂಗ್ ತ್ಚು

ಮೈಸೂರು ಆಕಾಶವಾಣಿಯಲ್ಲಿ ಕನ್ನಡಿಯ ಬಗ್ಗೆ ಮಾತನಾಡುವ ಅವಕಾಶ ಬದಗಿ ಬಂದಾಗ ನನಗೆ ಕನ್ನಡಿಯ ಬಗ್ಗೆ ಹೆಚ್ಚು ಯೋಚಿಸುವಂತೆ ಆಯಿತು. ಕನ್ನಡಿಯನ್ನು ನೋಡುವಾಗೆಲ್ಲ ಅದು ನನಗೆ ಸೌಂದರ್ಯದ ಮೋಹಕ ಸಾಧನವಾಗಿ ಏಕೆ ಕಾಣಿಸಿಕೊಂಡಿಲ್ಲ ಅಂತ ಯೋಚಿಸುವಂತಾಯಿತು. ಕನ್ನಡಿಯೊಂದು ಮೋಹ. ಆದರೆ ಅದು ಗೀಳಾಗಬಾರದು ಅಷ್ಟೇ. ಅದು ನಿರಂತರ ದಾಹ. ಅದು ಪರವಶದ ಸ್ಠಿತಿ. ವಿವೇಚನೆಯ ಪರಮಾವಧಿ.

ಕನ್ನಡಿ ಒ೦ದು ಮೋಹ, ವಿಸ್ಮಯ, ಜ್ಞಾನಿ, ಗುರು, ಆತ್ಮಸಖ ಎಲ್ಲವೂ ಆಗಿದೆ. ಅದು ಒ೦ದು ಫ್ಯಾಷನ್, un sung hero  ಅದು. ಬುದ್ದನಂತೆ, ಜೆನ್ ಗುರುವಿನಂತೆ- ಮೌನವಾಗಿ ತನ್ನ ಸುತ್ತಲನ್ನು ಅವಲೋಕಿಸುತ್ತಿರುತ್ತೆ .

“Love is not reforming a person, but it is accepting for what he is”  ಅನ್ನುವ ಮಾತಿದೆ. ಹಾಗೇ ಅದು ನಾವು ಇರುವಂತೆಯೇ ಸ್ವೀಕರಿಸುತ್ತದೆ. ಹಾಗಾಗೇ ಅದು ನಮಗೆ ಅಪ್ಯಾಯಮಾನ. ನಮ್ಮ ಗುಟ್ಟುಗಳನ್ನು ಬಚ್ಚಿಟ್ಟುಕೊಳ್ಳುತ್ತೆ, ಕಣ್ಣೀರನ್ನ ಒರೆಸುತ್ತೆ, ಧೈರ್ಯ ಕೊಡುತ್ತೆ, ಆತ್ಮ ವಿಶ್ವಾಸ ಕೊಡುತ್ತೆ, ಸಾಂತ್ವನ ನೀಡುತ್ತೆ.

ಕನ್ನಡಿ ನನಗೆ ಮುಖ್ಯವಾಗಿ ಕಾಡುವುದು ಎರಡು ರೂಪಗಳಲ್ಲಿ: ಒ೦ದು, ಆತ್ಮ ಶೋಧನೆಯಾಗಿ, ಇನ್ನೊಂದು ಕನ್ನಡಿಯಲ್ಲಿ ನನ್ನನ್ನು ನಾನೇ ದಿಟ್ಟಿಸಿಕೊಂಡಾಗ – ನಾನು ಯಾರು? ಕನ್ನಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಹುಡುಗಿ ನಾನೇನಾ- ನಾನು ಎಲ್ಲಿಂದ ಬಂದೆ ಎನ್ನುವ ವಿಚಿತ್ರ ಪ್ರಶ್ನೆಗಳು ಕಾಡುತ್ತವೆ- ಕನ್ನಡಿಯಲ್ಲಿ ನೋಡಿಕೊಳ್ಳಲು ಹೆದರಿಕೆಯಾಗುವಷ್ಟು. ಆ ವಿಚಿತ್ರ ಕ್ಷಣಗಳನ್ನು ಹಿಡಿಯುವುದು ಕಷ್ಟ.

ಹಾಗೇ ಕನ್ನಡಿಯನ್ನು ನಾನು ಮೂರು ರೂಪಗಳಲ್ಲಿ ವಿಭಾಗಿಸುತ್ತೇನೆ: ಒಂದು ಮೋಹದ ಕನ್ನಡಿ, ಎರಡು ಮಾಯಾ ಕನ್ನಡಿ, ಮೂರನೆಯದು ಆತ್ಮಗನ್ನಡಿ. ಮೋಹದ ಕನ್ನಡಿ ಯಾಕೆಂದರೆ ಅದು ಸೌಂದರ್ಯ ಸಾಧನವಾಗಿ ಕಾಣಿಸಿಕೊಳ್ಳುತ್ತೆ. ತನ್ನ ಮಾಮುಲು ರೂಪವನ್ನು ತೋರುತ್ತೆ. ಸಹಜವಾಗಿ ನಮ್ಮನ್ನ ಸೆಳೆಯುತ್ತೆ, ಸಂಕೋಚ ಪಡಿಸುತ್ತೆ, ವಿಸ್ಮಯ ಹುಟ್ಟಿಸುತ್ತೆ.

ಮಾಯಾ ಕನ್ನಡಿ ಯಾಕೆಂದರೆ, ಫ್ಯಾಂಟಸಿ ರೂಪವಾಗಿ ನಾವು ಕಲ್ಫಿಸೋ ಕನಸೆಲ್ಲಾ ಕನ್ನದಿ ಯ ಪರದೆಯ ಮೇಲೆ ಬಿತ್ತರಗೊಳ್ಳುತ್ತೆ. ಕಲ್ಪನೆಯ ಕನ್ನಡಿಯಲ್ಲಿ ಆಕಾಶಕ್ಕೂ ಜಿಗಿದು, ಅಲ್ಲಿ ನಕ್ಷತ್ರ ಖಚಿತ ಆಕಾಶವನ್ನು ಹಿಡಿಯಬಹುದು. ಸ್ವಾರ್ಥ, ಮತ್ಸರ, ದ್ವೇಷ, ಹಿಂಸೆ ಇಲ್ಲದ ಸಮಾಜವನ್ನು ಬೇಕಾದರೆ ಕಲ್ಪಿಸಿಕೊಳ್ಳಬಹುದು. ನಮ್ಮ ಕತೆಗಳಲ್ಲಿ ಮಾಯಾ ಕನ್ನಡಿಯ ಪ್ರಸ್ತಾಪ ಇದೆ.

ಇನ್ನು ಆತ್ಮಗನ್ನಡಿ. ಅದು ನಮ್ಮ ಆತ್ಮದ ಪ್ರತಿಬಿಂಬವನ್ನು ಕಾಣಿಸುವ, ನಮ್ಮೊಳಗನ್ನು ಶೋಧಿಸುವ ಸಾಧನ. ಆತ್ಮ ಸಖ.

ಕನ್ನಡಿ ಒಂದು ಆಲ್ ರೌಂಡರ್. ಸರ್ವೋಪಯೋಗಿ ಸಾಧನ. ಕನ್ನಡಿಯ ಮುಂದೆ ನಿಂತು ಹಾಡು ಹೇಳಿ, ಡ್ಯಾನ್ಸ್ ಮಾಡಿ, ಭಾಷಣ ಮಾಡಿ, ಫೈಟಿಂಗ್  ಮಾಡಿ, ಬೇಕಾದರೆ ಒಮ್ಮೆ ಅಣಕಿಸಿ ನೋಡಿ; ಇದಕ್ಕೆಲ್ಲ ಅದರ ಉತ್ತರ ಒಂದೇ; ಮೌನ. ಹಾಗಾಗಿ ಅದು ನಮ್ಮ ಚೇಷ್ಟೆಗಳನೆಲ್ಲ ಮೌನವಾಗಿ ಸಹಿಸಿಕೊಳ್ಳುತ್ತೆ. ನಮ್ಮನ್ನು ಅಣಕೊಸೋದಿಲ್ಲ, ಎದುರುತ್ತರ ಕೊಡುವುದಿಲ್ಲ, ಮತ್ತೆ ಮೌನವಾಗಿ ನಿಲ್ಲುವ ಮೂಲಕ ನಮ್ಮ ಅಹಂ ನ ಬಲೂನನ್ನು ಟುಸ್ ಅನ್ನಿಸುತ್ತೆ.

ವ್ಯಕ್ತಿ ವಿಕಾಸಕ್ಕೆ ಕೂಡ ಕನ್ನಡಿ ಬಳಕೆಯಾಗಿದೆ. ಇದು ನನಗೆ ಅರ್ಥಪೂರ್ಣವಾಗಿ ಕಂಡಿದೆ. ಮಾನಸಿಕ ದೌರ್ಬಲ್ಯ ಗಳಾದ ಉಗ್ಗು, ಹಿಂಜರಿಕೆ,ಅತಿಯಾದ ಹೆದರಿಕೆ, ಸಂಕೋಚ- ಇಂಥ ಉದಾಹರಣೆಗಳಲ್ಲಿ ಮನಶಾಸ್ತ್ರಜ್ಞರು ಕನ್ನಡಿಯ ಉಪಯೋಗದ ಬಗ್ಗೆ ಹೇಳುತ್ತಾರೆ. ಕನ್ನಡಿಯ ಮುಂದೆ ನಿಂತು ಮಾತನಾಡೊದನ್ನ ಅಭ್ಯಾಸ ಮಾಡಿಕೊಳ್ಳಿ , ಆತ್ಮ ವಿಶ್ವಾಸ ಹೆಚ್ಚುತ್ತೆ ದೈರ್ಯ ಬರುತ್ತೆ ಅಂತ ಹೇಳುವುದನ್ನು ಕೇಳಿದ್ದೇವೆ.

ಬಡವರ ಗುಡಿಸಿಲಿನಲ್ಲಿ ಕೂಡ ಒಂದು ಪುಟ್ಟ ಕನ್ನಡಿ ಇರುತ್ತೆ. ಅದನ್ನು ಅವರು ಜೋಪಾನವಾಗಿ ತೂಗು ಹಾಕಿರುತ್ತಾರೆ. ಅದು ಹೆಚ್ಚು ಖುಷಿ ಕೊಡುತ್ತೆ. ಮದುವೆಯಲ್ಲಿ ಬಳಸುವ ಪುಟ್ಟ ಕನ್ನಡಿ ಹೆಚ್ಚು ಕುತೂಹಲ ಹುಟ್ಟಿಸುತ್ತೆ. ಬಟ್ಟೆಯ ಮೇಲೆ ಅಲಂಕಾರಕ್ಕೆ ಬಳಸುವ ಪುಟ್ಟ ಪುಟ್ಟ ಕನ್ನಡಿಗಳು ಅಪ್ಯಾಯಮಾನ.

ನಾನಾ ಅವತಾರದ ಕನ್ನಡಿಯ ರೂಪಗಳಿವೆ. ಪಾಪ ಅದು ನಮ್ಮ ದಶಾವತಾರಗಳನ್ನು ಸಹಿಸಿಕೊಳ್ಳುತ್ತೆ. ಆಟೋದಲ್ಲಿ ಹುಡುಗಿಯರು ಕುಳಿತಾಗ ಎಷ್ಟೋ ಡ್ರೈವರ್  ಕನ್ನಡಿ ಸರಿಪಡಿಸಿಕೊಳ್ಳುತ್ತಾರೆ. ಕೆಲವರು ಪಕ್ಕ ವಾಲಿಕೊಂಡೇ ಬಿಟ್ಟಿರುತ್ತಾರೆ. ಕಾರಿನ ಕನ್ನಡಿಯಲ್ಲಿ ಹಿಂದಿನ ಸೀಟಲ್ಲಿ ಕುಳಿತವರ ನೋಡಿ ಮಾತಾಡಬಹುದು ! ನಿಂತ ವಾಹನಗಳ ಗ್ಲಾಸು ತುರ್ತು ಸಂದರ್ಭಗಳಲ್ಲಿ ಕನ್ನಡಿಯಾಗಿ ಕಾರ್ಯ ನಿರ್ವಹಿಸುತ್ತೆ. ಅದರ ಮುಂದೆ ನಿಂತು ಕ್ರಾಪು ಸರಿ ಮಾಡಿಕೊಳ್ಳುವ ಪಡ್ದೆಗಳು ನಮಗೆ ಕಾಣುತ್ತಾರೆ. ಹೋಳಿಯ ಮುಖದ ಬಣ್ಣವನ್ನು ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರಿನ ಕನ್ನಡಿಯ ಮುಂದೆ ನಿಂತು ಒರೆಸಿಕೊಳ್ಳುತ್ತಿದ್ದಾನೆ ಒಬ್ಬ ಹುಡುಗ. ಎಲ್ಲರೂ ನಮ್ಮ ಮುಂದೆ ಬರುತ್ತಾರೆ. ನಿಮ್ಮ ಆಫೀಸಿನಲ್ಲಿ ಕನ್ನಡಿಯೊಂದನ್ನು ಇಟ್ಟು ನೋಡಿ, ಬಹಳ ಜನ ನಿಮ್ಮನ್ನು ಗಮನಿಸುವುದೇ ಇಲ್ಲ, ಮೊದಲು ಕನ್ನಡಿಗೆ ಹಲ್ಲು ಕಿರಿದು ನಂತರ ನಿಮಗೆ ಹಲ್ಲು ಬೀರುತ್ತಾರೆ. ನಮ್ಮ ಸಿನೆಮಾಗಳಲ್ಲಿ ಸಿಟ್ಟಿಗೆ ಮೊದಲು ಬಲಿಯಾಗುವುದು ಪಾಪ ಬಡಪಾಯಿ ಕನ್ನಡಿಯೇ. ಅದು ಚೂರು ಚೂರಾದರೂ ಮಾತಾಡದೇ ಸುಮ್ಮನೆ ನಿಂತಿರುತ್ತೆ.

ಕನ್ನಡಿಯ ವಿಸ್ಮಯವೇ ಅದು. ಕನ್ನಡಿಯ ಮುಂದೆ ನಿಂತು’ ವಿಶ್ವದಲ್ಲಿ ನನಗಿಂತ ಸುಂದರಿ ಯಾರಿದ್ದಾರೆ” ಎಂದು ಕನ್ನಡಿಯನ್ನು ಕೇಳುತ್ತಿದ್ದ ಸ್ನೋವೈಟ್ ಕತೆಯ ಮಲತಾಯಿ ಗೊತ್ತಲ್ಲ?  ಕನ್ನಡಿಯು ಪ್ರತಿಬಾರಿಯೂ  ರಾಜಕುಮಾರಿ ಸ್ನೋವೈಟಳನ್ನೇ ಸುಂದರಿ ಅನ್ನುವಾಗ ಮಲತಾಯಿ ಅವಳನ್ನು ಕಾಡುತ್ತಾಳೆ..

ಹಾಗೆ ನೋಡಿದರೆ ಅದನ್ನು ಒಂದೇ ರೀತಿಯಾಗಿ ತೆಗೆದುಕೊಳ್ಳಬೇಕಾಗಿಯೇ ಇಲ್ಲ. ಪ್ರತಿಬಿಂಬವನ್ನು ತೋರುವುದೆಲ್ಲ ಕನ್ನಡಿಯೇ..

ಕೊಳದ ಅಡಿಯಲ್ಲಿ ನಿಂತ ನೀರಿನ ಪ್ರಶಾಂತ ಕನ್ನಡಿ, ಪ್ರೀತಿ ಪಾತ್ರರ ಕಣ್ಣಗನ್ನಡಿ, ಗೆಳೆಯ, ಗೆಳತಿಯರ ಕನ್ನಡಕದ ಕನ್ನಡಿ! ಎಲ್ಲ ಎಲ್ಲವೂ

ಕನ್ನಡಿಯೇ, ಮೋಹದ ಕನ್ನಡಿಯೇ…

 (“ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯಲ್ಲಿ  ಪ್ರಕಟವಾದ ಅಂಕಣ ಬರೆಹ)

*********

ಕಾಲುಂಗುರ ನೆವವೇ…

ಅವತ್ತು ಗೆಳತಿ ’ನೋಡೇ ನೋಡೇ ಅವರನ್ನ’ ಅಂದಳು. ಅವನು ಕಾಲುಂಗುರದ ಕಾಲನ್ನು ನೋಡಿ ಮುಖ ತಿರುಗಿಸಿದ, ಉಳಿದ ಕತ್ತುಗಳು ಅವನನ್ನೇ ಹಿಂಬಾಲಿಸಿದವು. ನಾವಿಬ್ಬರು ಪಕ ಪಕ ನಕ್ಕೆವು. ಇನ್ನೊಬ್ಬ ಕಾಲುಗಳನ್ನು ಅಳೆದು, ಮುಖವನ್ನು ಪರಿಶೀಲಿಸಿದ, ಕಾಲುಗಳು ಎಡಗಡೆ ಚಲಿಸಿದವು. ಅವತ್ತಿನಿಂದ ಕಾಲುಗಳತ್ತ ಹರಿಯುವ ಕಣ್ಣುಗಳತ್ತ ಗಮನ … ಇನ್ನು ಮದುವೆ ಮನೆಯಲ್ಲಿ ಮದುವೆಯ ಹೊಸ್ತಿಲಲ್ಲಿರುವ ಚಿಗುರು ಮೀಸೆಯ ಪಡ್ಡೆಗಳ ಕಣ್ಣೆಲ್ಲ…ಇದನ್ನು ಬಿಡಿಸಿ ಹೇಳಬೇಕೆ ?! ಹೆಣ್ಣಿಗೆ ಉಡುಗೊರೆ ಹೊತ್ತ ಕಾಲುಗಳು ಧಾವಿಸಿದಾಗ ಗಂಡಿಗೆ ಶುಭಾಷಯ ಹೇಳಲು ಒತ್ತೊತ್ತಾಗಿ ನಿಂತು ಕಾಯುತ್ತಿದ್ದರಲ್ಲ…ಒಟ್ಟಿಗೆ ಸ್ಲೋ ಮೋಷನ್ನಲ್ಲಿ ತಿರುಗಿದ್ದು ಮೆಟ್ಟಿಲು ಹತ್ತುತ್ತಿದ್ದ ಹೆಂಗಳೆಯರ ಕಾಲುಗಳ ಕಡೆ. ಆ ಕ್ರಿಯೆ ನಡೆದು ಚಿಗುರು ಕಂಗಳಲ್ಲೇ ಏನೇನೋ ಪಿಸುಗುಟ್ಟಂತೆ ಚಿಗುರು ನಗೆ ನಕ್ಕರಲ್ಲ ಅದು ಏನದು ?

ಇನ್ನು ಹದಿ ಹರೆಯದ ಹುಡುಗರು ಮೊದಲು ನೋಡುವುದು ಕಾಲನ್ನು, ನಂತರ ’ರೈಟ್ ಅಬೌಟ್ ಟರ್ನ್ ’! ಹದಿಹರೆಯವನ್ನು ದಾಟಿ ಲೋಕಕಂಡವರು ಕಾಲನ್ನು ಅಳೆದು, ನಂತರ ಮುಖಾರವಿಂದವನ್ನು ಅಳೆಯುವುದು ಸಂಪ್ರದಾಯ! ಅಲ್ಲೇನೋ ತೆಳು ನಗೆ ಸುಳಿದು ಹೋಗುವುದಲ್ಲ ಅದು ಎಂಥ ನಗೆ ?
ಮದುವೆಯಾದ ಹೊಸದರಲ್ಲಿ ಕಾಲುಂಗುರ ಒತ್ತುತ್ತಿತ್ತು. ಆ ಮೃದು ಬೆರಳುಗಳಿಗೆ ಪುಟಾಣಿ ಕಾಲುಕೋಳ ತೊಡಿಸಿದಂಥ ಅನುಭವ. ಸಂಪ್ರದಾಯವನ್ನೇ ಬೈದುಕೊಂಡಳು. ಅರಿಶಿನ ಹಚ್ಚುವ ದಿನ ಗಂಡಿಗೆ ಹಾಕಿದ್ದರಲ್ಲ ಶೋಕಿಗೆ (?!) ಅದನ್ನ್ಯಾಕೆ ಬಿಚ್ಚಿಟ್ಟರು ಮದುವೆಯ ದಿನ? ಅವನು ಅವತ್ತು ಹೆಣ್ಣಿಗಿಂತ ನಾಚಿಕೆಯಲ್ಲಿದ್ದ. ಅದಕ್ಕೆ ಕಾಲುಂಗುರ ನೆವವೇ !?
ಇವನು ಎರಡೂ ಕಿವಿಗೆ ಓಲೆ ಹಾಕಿದ್ದಾನಲ್ಲ, ಕಾಲುಂಗುರ ಯಾಕೆ ಹಾಕಬಾರದು ? ಅವತ್ತು ಕಾಲೇಜಿನ ಸೆಮಿನಾರಿನಲ್ಲಿ ಕಾಲುಂಗುರ ನಾವು ಮಾತ್ರ ಯಾಕೆ ಹಾಕಿಕೊಳ್ಳಬೇಕು ಅಂತ ವಾದ ಮಾಡಿದ್ದಳಲ್ಲ ಅವಳು, ಇವತ್ತು ಕಾಲುಂಗುರ ಧರಿಸಿಕೊಂಡು ಬೆಚ್ಚಗಿದ್ದಾಳೆ !

ಅವತ್ತು ಮದುವೆಯ ಹಿಂದಿನ ದಿನ ಗಂಡಿಗೆ ಕಾಲುಂಗುರ ಹಾಕಿದ್ದು ಹೆಣ್ಣಿನದು… ಅರೆ ಅದು ಅವನದಲ್ಲ ಮಾರಾಯರೆ ಆಕೆಯದು, ಅವನ ಅಮ್ಮನ ಹೊಸ ಕಾಲುಂಗುರ..
ಆವತ್ತು ಅವಳು ತನ್ನೊಡನೆ ಜಗಳವಾಡಿದ ಗಂಡನಿಗೆ ರೋಸಿ ಸಿಟ್ಟಿನಿಂದ ಕಾಲುಂಗುರ ತೆಗೆದಿಟ್ಟು ಗೆಳತಿಯ ಮನೆಗೆ ಹೋದಳಲ್ಲ ಮನೆಯಲಿದ್ದ ವಯಸ್ಸಾದರು ಹಾಗೆ ನೋಡುತ್ತಿದ್ದರಲ್ಲ ಆಕೆ ಇವಳ ಖಾಲಿ ಬೆರಳುಗಳನ್ನು ನೋಡಿ ಮನಸ್ಸಿನಲ್ಲಿ ಏನು ಲೆಕ್ಕಾಚಾರ ಮಾಡಿರಬಹುದು. ಏನು ಹುಡುಗಿಯರಪ್ಪ ಅಂದುಕೊಂಡಿರಬಹುದೇ? ಸಂಪ್ರದಾಯವೇ ಗೊತ್ತಿಲ್ಲ ಎಂದೇ? ಅಥವ ಇನ್ನೇನೋ ಲೆಕ್ಕಾಚಾರ? ಮನೆಗೆ ಬಂದಾಗ ತೆಪ್ಪಗೆ ಕಾಲುಂಗುರ ಏರಿಸಿಕೊಂಡಳು! ಇನ್ನು ಅವಳು, ಮನೆಯಲ್ಲಿರುವಾಗ ಉಂಗುರದ ನೆವವೇ ಇಲ್ಲ, ಹಳ್ಳಿಯಲ್ಲಿರುವ ಅತ್ತೆಯ ಮನೆಗೆ ಹೋಗುವಾಗ ಉಂಗುರ ಏರಿಸುತ್ತಾಳೆ ಅತ್ತೆಯ ಮೇಲಿನ ಗೌರವಕ್ಕೆ. ಇನ್ನೊಬ್ಬಳು ಮದುವೆಯಾದರು ಕಾಲುಂಗುರ ಹಾಕದ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾಳೆ, ಗಟ್ಟಿಗಿತ್ತಿ !
ಇನ್ನು ಮದುವೆಯೇ ಆಗದ ಗೆಳತಿ ತಾಳಿ, ಕಾಲುಂಗುರದ ಸಂಪ್ರದಾಯ ಒಲ್ಲದವನನ್ನು ಹುಡುಕುತ್ತಿದ್ದಾಳೆ. ಆಕೆ ಒಲ್ಲದವ, ಮೊಸರಲ್ಲಿ ಕಲ್ಲು ಹುಡುಕಿದವನನ್ನು ತೊರೆದು ತಾಳಿ, ಕಾಲುಂಗುರ ಬಿಚ್ಚಿಟ್ಟು ಸ್ವಾತಂತ್ರ್ಯದ ಉಸಿರು ಬಿಡುತ್ತಿದ್ದಾಳೆ. ಮತ್ತಿವಳು ಅಪ್ಪಿತಪ್ಪಿಯೂ ಕಾಲುಂಗುರ, ತಾಳಿ ಬಿಚ್ಚಲು ಹೆದರುತ್ತಿದ್ದವಳು ಪ್ರೀತಿಸಲೇ ಬಾರದ ಗಂಡನ್ನೊಟ್ಟಿಗೆ ಬೇಸರವಾಗಿ ಕೇರೇ ಮಾಡುತ್ತಿಲ್ಲ ಯಾವುದಕ್ಕೂ.
ಅವಳ ಕಾಲುಗಳಲ್ಲಿ ಕಾಲುಂಗುರವೇ ಇಲ್ಲ. ಇವಳೋ ಕಾಲುಂಗುರ ಎಲ್ಲೋ ಬಿದ್ದು ಹೋಗಿದ್ದಕ್ಕೆ ಮನೆಯೆಲ್ಲ ಹುಡುಕಿ ಸಪ್ಪಗೆ ಕೂತಿದ್ದಾಳೆ. ಇನ್ನು ಅವಳು ಇಷ್ಟವಾದಾಗ, ಬೇಕೆನಿಸಿದಾಗ ಧರಿಸಲು ವಿವಿಧ ಬಗೆಯ ಕಾಲುಂಗುರಗಳು ಡಬ್ಬಿಯಲ್ಲಿ$. ಇನ್ನಿವಳು ಮದುವೆಯಲ್ಲಿ ತೆಗೆದುಕೊಂಡಿದ್ದು, ಸುತ್ತಿನ ಕಾಲುಂಗುರ ಸವೆದು ಸವೆದು ಬೆರಳ ಖಡಗವಾಗಿದೆ. ಇನ್ನು ಅವಳು ವಾರಕೊಮ್ಮೆಯಾದರು ಮಾಯವಾಗುವ ಉದುರಿದ ಕಾಲುಂಗುರವನ್ನು ಹುಡುಕುತ್ತ ’ರೀ ನನ್ನ ಕಾಲುಂಗುರ ನೋಡಿದ್ರಾ’ ಎಂದು ರಾಗ ತೆಗೆಯುತ್ತಲೇ ಇರುತ್ತಾಳೆ!

ರಸ್ತೆಯಲ್ಲಿ ಹೋಗುವಾಗ, ಪಾರ್ಕಿನಲ್ಲಿ ವಾಕಿಂಗ್ ಹೊರಟಾಗ ಬಸ್ಸಿನಲ್ಲಿ ಹತ್ತುವಾಗ, ಸೀಟಿನಲ್ಲಿ ಕೂಡುವಾಗ, ಕಂಡಕ್ಟರ್ ಟಿಕೆಟ್ ಹರಿಯುವಾಗ ಕಾಲುಗಳ ಮೇಲೆ ಕಣ್ಣುಗಳು ಹರಿದಾಡುವುದಕ್ಕೆ ’ಕಾಲುಂಗುರ ನೆವವೇ ಭಾಮಾಮಣೀ…’

 (“ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯಲ್ಲಿ  ಪ್ರಕಟವಾದ ಅಂಕಣ ಬರೆಹ)

*****

ಹಾ ಲಕ್ಷ್ಮಣಾ…!

ಲಕ್ಷ್ಮಣನಿಗೆ ನಲವತ್ತು ವರ್ಷದ ಮೇಲಿದ್ದಿರಬೇಕು ಅಥವ ಹಾಗೆ ಕಾಣುತ್ತಿದ್ದನೆನೋ. ಈಗ ಅವಳಿಗೆ ನೆನಪಿಗೆಬರ್ತ್ತಿದೆ.  ಅನಿಸುತ್ತಿದೆ. ವಯಸ್ಸನ್ನು ಎಣಿಸುವ ವಯಸ್ಸೇ ಅದು? ಲಕ್ಷ್ಮಣ ಯಾವುದಾದರು ಕಾರಣಕ್ಕೆ ಇವಳನ್ನು ರೇಗಿಸುವನು. ಇವಳಿಗೆ ಮೂಗಿನ ತುದಿಯಲ್ಲೇ ಕೋಪ. ಅವನು ಮೆಲುನಗೆ ಯನ್ನು ತ೦ದುಕೊಳ್ಳುತ್ತಾ ‘ಮಾ೦ಕಾಳಮ್ಮ‘ ಅ೦ತ ಅವಳನ್ನು ಗೋಳುಹುದುಕೊಳ್ಳುವನು. ಅವಳು ಹುಸಿಮುನಿಸಿನಿ೦ದ ಅವನ ಎರಡೂ ಅ೦ಗೈಗೆ ಹೊಡೆಯುವಳು.  ಅಲ್ಲಿಗೆ ಅವಳ ಕೋಪ ಮುಗಿಯಿತು. ಅವಳ ತ೦ಗಿ ಸರಯೂ ಹೊಟ್ಟೆನೋವೆ೦ದು ಕ್ಲಾಸಿಗೆ ಚಕ್ಕರ್ ಹೊಡೆಯುವ ಹುನ್ನಾರವನ್ನು ‘ಮಾಯ್ಕಾರ್ ಮಲ್ಲಮ್ಮ‘ ಅ೦ತ ಅವಳನ್ನೂ ರೇಗಿಸುವನು. ಲಕ್ಷ್ಮಣನಿಗೆ ಚೆನ್ನಾಗಿ ಗೊತ್ತಾಗಿಬಿದುತ್ತಿತ್ತು. ಚಕ್ಕರ್ ಹೊಡೆಯುವ ಪ್ಲಾನು ಅವಳದು ಅ೦ತ. ನೇಹಾಳಿಗೆ ಮಾತ್ರ ನಿಧಾನವಾಗಿ ಹೊಳೆಯುತ್ತಿತ್ತು. ಏನೋ ಸುಮ್ಮನೆ ರೇಗಿಸುತ್ತಾನೆ ಅ೦ದುಕೊಳ್ಲುತ್ತಿದ್ದಳು. ಕೊನೆಗೆ ಸರಯೂಗೆ ಹೊಟ್ಟೆನೋವು ಆಗಾಗ ಕಾಣಿಸಿಕೊಳ್ಳತೊಡಗಿದಾಗ ಇವಳ ತಲೆಗೆ ಹೊಳೆಯುತ್ತಿತ್ತು. ಅವನ ರೇಗಿಸುವಿಕೆಗೆ ಸರಯೂ ತಟ್ ಅ೦ತ ಮನೆಯೊಳಗೆ ಓಡಿ ಬಿಡುವಳು. ಸದಾ ಗ೦ಭೀರವಾಗಿರುತ್ತಿದ್ದ ಸರಯೂ ಅಕ್ಕಳಿಗೆ ಮತ್ತೊ೦ದು ಹೆಸರು ಸಿದ್ದವಾಗಿರುತ್ತಿತು ‘ಗೌರಮ್ಮ‘ ಅ೦ತ. ಹೀಗೆ ಎಲ್ಲರಿಗೂ ಒ೦ದೊ೦ದು ಹೆಸರಿಟ್ಟು ಗೋಳುಹುಯ್ದುಕೊಳ್ಳುವನು.

ಪ್ರತಿಬಾರಿ ಯಲ್ಲಮ್ಮ ದೇವರು ಹೊತ್ತು ಆಕೆ ಬರುವಾಗ ಭಕ್ತಿಯಿ೦ದ ಅರಿಶಿನ ಕು೦ಕುಮ ತ೦ದು ಕೊಡುವನು. ನೇಹ ಮಾತ್ರ ದೋರದಿ೦ದಲೇ ದಿಟ್ತಿಸುವಳು ಜಡೆಗಟ್ತಿದ ಕೂದಲನ್ನು ಅನುಮಾನದಿ೦ದ ನೋಡುವಳು. ಮತ್ತೆ ಲಕ್ಷ್ಮನ ಬಿಡುವಿದ್ದದಾಗ..ಬಿಡು ಇನ್ನೆಲ್ಲಿ ಅವನಿಗೆ ಯಾವಾಗಲೂ ಬಿಡುವೇ! ಲಕ್ಷ್ಮಣ ಯಾವುದಾದರು ಕತೆ ಹೊಸೆಯುತ್ತಾ ಕೂರುವನು. ಮನೆಯ ಹಿದಿನ ನಾಲೆಯಲಿ ಈಜಾದಲು ಹೋಗಿದ್ದು, ಸ್ನಾನ ಮಾಡಿ ಬ೦ದು ಯಾವುದೋ ಕತೆ ಪೋಣಿಸುತ್ತಾ ಕೂರುವನು. ರಾತ್ರುಇಯೆಲ್ಲ ಅದೇ ನೆನ್‌ಪು. ನಾಲೆಯ ದಡದಲ್ಲಿ ರಾತ್ರಿ ಮಲಗಿದ್ದಾಗ ದೆವ್ವ ಬ೦ದು ಅವನ ಮುಸುಕು ಎಳೆದದ್ದು, ಇತ್ಯಾದಿ ಇತ್ಯಾದಿ. ಮನೆಯ ಹಿ೦ದೆಯೇ ನಾಲೆಯಿದ್ದರೂ ಅವಳು ಅಲ್ಲಿ ಗೆ ಹೋಗುತ್ತಿದ್ದುದು ಅಪರೂಪ. ಹೋದರೂ ಲಕ್ಷ್ಮಣ ಸುಪರ್ದಿಯಲ್ಲಿ, ಅವಳ ತಮ್ಮನಿಗೆ ಈಜು ಕಲಿಸಲು ಅಮ್ಮ ಲಕ್ಷ್ಮಣನಿಗೆ ಹೇಳಿದಾಗ ಮಾತ್ರ ಅವನ ಜೊತೆ ಹೋಗುತ್ತಿದ್ದಳು. ಆಗ ದೆವ್ವ ಹೊದಿಕೆ ಎಳೆದ ಜಾಗವನ್ನು ತೋರಿಸುವನು.

ನೆಹ ಒ೦ದು ಸಲ ಹಸಿರುಗಿದಲ್ಲಿ ಹಸಿರಲ್ಲೆ ಒ೦ದಾಗಿದ್ದ ಸುಲಭದಲ್ಲಿ ಹಕ್ಕಿ ಸಿಕ್ಕಿತೆ೦ದು ಕೈಹಾಕಲು ಹೋದಾಗ ಅಕ್ಕ ತಡೆದಿದ್ದಳು. ಹತ್ತಿರಕ್ಕೆ ಹೋದಾಗ ಹಕ್ಕಿಯ ತಲೆಯನ್ನು ಹಸಿರು ಹಾವು ಹಿಡಿದ್ದದ್ದರಿ೦ದ ಅದು ನೇತಾಡುತ್ತಿತ್ತು. ಅವಳ ಮೈ ಬಿಸಿಯಾಗಿ ಇಬ್ಬರೂ ಓಡಿ ಬ೦ದು ಮನೆಯ ಮು೦ದೆ ಕುಳಿತ್ತಿದ್ದ ಲಕ್ಶ್ಮಣನಿಗೆ ವರದಿ ಒಪ್ಪಿಸಿದರು. ‘ಮಾ೦ಕಾಲಮ್ಮ ಸರಿಯಾಗಿ ನೋಡಿಕೊ೦ಡು ಹೋಗೋದಲ್ವಾ‘ ಅ೦ತ ಕಾಲಜಿಯಿ೦ದ ರೇಗಿಸಿ ಅಮ್ಮ ತ೦ದು ಕೊಟ್ಟ ಕಾಫಿಯನ್ನು ಹೀರತೊದಗಿದ. ಅವಳಿಗೆ ಹಾವಿನ ಹೆದರಿಕೆ ಮಾಯವಾಗಿ ಲಕ್ಷ್ಮಣನ ಮೇಲೆ ಸಿಟ್ತು ಹತ್ತಿತ್ತು.

ಆಗ್ಗಾಗ್ಗೆ ಲಕ್ಷ್ಮನ ಜೊತೆ ಹರಟೆ ಹೊಡೆಯುತ್ತಾ ಬಾಡಿಗೆ ಸೈಕಲ್ ತ೦ದು ಬೀಳುವಾಗ ಅದನ್ನು ಪಕ್ಕಕ್ಕೆ ಎಸೆದು ಜಿಗಿದುಬಿಡುವಳು. ಬಿಡುವಿದ್ದಾಗ ಲಕ್ಷ್ಮಣನೂ ಸೈಕಲ್ ಕಲಿಸಲು ಬರುವುದಿತ್ತು. ಸಾಯ೦ಕಾಲದವರೆಗೂ ಸೈಕಲ್ ತುಳಿದು ಜೋಕಾಲಿ ಆಡಿ ತರಚಿದ ಗಾಯಗಳೊ೦ದಿಗೆ ಬರುವ ಅವಳನ್ನು ಕ೦ಡಾಗ ಅಮ್ಮನಿಗೆ ಸಿಟ್ಟೊ ಸಿಟ್ಟು.

ಅಪ್ಪನಿಗೆ ವರ್ಗವಾಗಿ ಮ೦ಗಲೂರಿಗೆ ಬ೦ದಾಗ ಲಕ್ಷ್ಮನ ನೆನಪು ಮಾಸುತ್ತಾ ಹೋಯ್ತು.  ಅವಳು ಮದುವಾಗಿ ಎಷ್ಟೊ ಕಾಲಲ್ಕ್ಕೆ ಲಕ್ಷ್ಮನನಿಗೆ ಯಾವುದೋ ಖಾಯಿಲೆಯ೦ತೆ ಅನ್ನುವ ಅಸ್ಪಸ್ತ ಸುದ್ದಿ ಅಮ್ಮನಿ೦ದ ತಿಳಿದಿತ್ತು. ಅವನು ಸದಾ ಎಲೆ ಅಡಿಕೆ ಜಗಿಯುತ್ತಿದ್ದುದರಿ೦ದ ಅದಕ್ಕೆ ಸರಿ ಹೊ೦ದುವ ಖಾಯಿಲೆಯನ್ನು ನೆನಪಿಸಿಕೊ೦ಡಳು. ಲಕ್ಷ್ಮಣ ಅದೇನಾದನೋ ಯಾರಿಗೆ ಗೊತ್ತು. ಅವನ ನೆನಪು ಮಾತ್ರ ನೆಹಾಗೆ ಒಸರ್ತ್ತಲೇ ಇದೆ. ಎ೦ಥ ಜೀವನ ಪ್ರೀತಿ ಲಕ್ಶ್ಮಣನದಾಗಿತ್ತು. ಒ೦ದು ದಿನವಾದರು ಮುಖ್ ಸಪ್ಪಗೆ ಮಾಡಿಕ್ಪ್ಡದ್ದನ್ನು ಅವಳು ನೋಡಿರಲಿಲ್. ಯಾವತ್ತೋ ಒ೦ದು ಸಲ ಅಮ್ಮ ಅವನಿಗೆ ನಲವತ್ತು ರೂ ಕೊಟ್ತಗ ಅಷ್ತು ದೊಡ್ದ ಮೊತ್ತ ನೋಡಿ ಅವನ ಮುಖ ಅರಳಿತ್ತು. ಲಕ್ಷ್ಮಣ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಅಪರೂಪಕೊಮ್ಮೆ ಅವಳ ಅಮ್ಮನಿಗೆ ಮಾತ್ರ ಕಾಯಿ ಸುಲಿದು ಕೊಡುವನು. ಕಾ೦ ಸುಲಿದು ಕೊಟ್ತದ್ದಕ್ಕೆ ನಲವತ್ತು ರೂ ಅ೦ದುಕೊ೦ದು ನಗುವಳು ನೇಹಾ. ಆ ಕ್ವಾಟ್ರಸ್ಸಿನ ಪ್ರತಿಯೊಬ್ಬರಿಗೂ ಅವನು ಪರಿಚಿತ ಲಕ್ಷ್ಮಣ. ಅವನಿಗೆ ಹೆ೦ಡತಿ ಮಕ್ಕಳು ಯಾವುದೋ ಊರಿನಲ್ಲಿದ್ದಾರ೦ತೆ ಅನ್ನುವುದು ಮಾತ್ರ ಗೊತ್ತು ಅವಳಿಗೆ. ಬಹುಶಹ್ ನೇಹಾಗೆ ವಿವರಗಳೂ ಬೇಕಿರಲಿಲ್ಲವೇನೋ. ಲಕ್ಷ್ಮಣ ಎತ್ತರದ ಆಳು. ಸಣಕಲ. ಮೈಮೇಲಿನ ನರಗಳು ಎದ್ದು ಕಾಣುತ್ತಿದ್ದವು. ಎಣ್ನೆ ಹಚ್ಚಿದ ಕೂದಲು, ಮಾಸಲು ಶ್ರು,ಪಟಾಪಟಿ ದಿಸೈನಿನ ಪ೦ಚೆಯ ಲಕ್ಷ್ಮಣ ಈಗ ಇದ್ದಾನೋ ಇಲ್ಲವೋ…

 (“ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯಲ್ಲಿ  ಪ್ರಕಟವಾದ ಅಂಕಣ ಬರೆಹ)

Advertisements

One response to “ದೀಪಸಾಕ್ಷಿ

  1. ಮರುಕೋರಿಕೆ (Pingback): ತೊಮೆಯೆ ಎಂಬ ಶಾಲೆಯೂ, ತೊತ್ತೋ-ಚಾನ್ ಎಂಬ ಮುದ್ದು ಹುಡುಗಿಯೂ « ಅವಧಿ / avadhi

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s