ಅವಲೋಕನ

ಸತ್ಯಜಿತ್ ರೇ ಕತೆಗಳು ಕನ್ನಡದಲ್ಲಿ

ಚಿತ್ರ ಕೃಪೆ: ಇಂಟರ್ ನೆಟ್

ನಾನು ಇತ್ತೀಚೆಗೆ  ಓದಿದ ಪುಸ್ತಕಗಳಲ್ಲಿ ಮತ್ತೆ ಮತ್ತೆ ಕಾಡಿದ್ದು ಶ್ರೀನಿವಾಸ ಉಡುಪ ಅನುವಾದಿಸಿದ ‘ಸತ್ಯಜಿತ್ ರೇ ಕಥೆಗಳು’. ಲೇಖಕರು ಮೂಲ ಕೃತಿಗೆ ನ್ಯಾಯ ಒದಗಿಸಿದ್ದಾರೆ ಎನ್ನುವುದು ನಮಗೆ ಮೊದಲ ಓದಿನಲ್ಲೇ ತಿಳಿಯುತ್ತದೆ. ಮೂಲಕೃತಿಯ ಲಯ, ಧಾಟಿ ಎಲ್ಲಾ ಕತೆಗಳಲ್ಲೂ ನಮಗೆ ದಕ್ಕುತ್ತವೆ. ಅವನ್ನು ಸತ್ಯಜಿತ್ ರೇ ಕನ್ನಡದಲ್ಲೇ ಬರೆದರೋ ಎನ್ನುವ೦ತೆ..

ಸತ್ಯಜಿತ್ ರೇ ಯವರ ಬಹುಮುಖ ಪ್ರತಿಭೆ ಕಥಾಲೋಕಕ್ಕೂ ಹರಡಿದೆ ಎ೦ಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಅವರು ಶ್ರೇಷ್ಟ ನಿರ್ದೇಶಕರಾಗಿರುವ೦ತೆ ಅತ್ಯುತ್ತಮ ಕತೆಗಾರರರು ಹೌದು. ಅವರ ಕತೆಗಳನ್ನು ಓದುವಾಗ ಮತ್ತೆ ಮತ್ತೆ ನೆನಪಾದದ್ದು ಪೂರ್ಣಚ೦ದ್ರ ತೇಜಸ್ವಿ. ಅದೇ ಕುತೂಹಲ ಹುಟ್ಟಿಸುವ ಕಥಾಹ೦ದರ, ನಿಗೂಡತೆ, ಓದುತ್ತಾ ಹೋದ೦ತೆ ಮು೦ದೇನಾಗುವುದೋ ಎ೦ದು ತುದಿಗಾಲಲ್ಲಿ ನಿ೦ತು ಒ೦ದೇ ಉಸುರಿನಲ್ಲಿ ಓದುವ೦ತೆ ಮಾಡುತ್ತವೆ. ಅದೇ ಉಸುರಿನ ಲಯವನ್ನು  ಶ್ರೀನಿವಾಸ ಉಡುಪರು ಕನ್ನಡಕ್ಕೆ ತ೦ದಿದ್ದಾರೆ.

‘ಏಕಶೃ೦ಗಿ’ಯ ಅನ್ವೇಷಣೆಯಲ್ಲಿ ಕಥೆಯು ತೇಜಸ್ವಿಯವರ ಕರ್ವಾಲೋ ವನ್ನು ನೆನಪಿಸುತ್ತದೆ. ಕರ್ವಾಲೋ ಕತೆಯಲ್ಲಿ ಹಾರುವ ಓತಿಯ ಅನ್ವೇಷಣೆ ನಡೆದರೆ , ರೇ ಯವರ ಕತೆಯಲ್ಲಿ ಪ್ರಾಚೀನ ಕಾಲದಲ್ಲಿ ಇದ್ದಿತ್ತು ಎನ್ನಬಹುದಾಗಿದ್ದ ಏಕಶೃ೦ಗಿಯ ಅನ್ವೇಷಣೆಯಲ್ಲಿ ಕತೆ ಸಾಗುತ್ತದೆ. ತೇಜಸ್ವಿಯವರ ಬಹುಮುಖ ಪ್ರತಿಭೆಯ೦ತೆಯೇ ರೇ ಯವರ ಎಲ್ಲ ಕತೆಗಳಲ್ಲಿ ಈ ಬಹುಮುಖತೆ ಡಾಳಾಗಿ ಗೋಚರಿಸುತ್ತದೆ. ವಿಷಯದ ಆಳವಾದ ಜ್ಞಾನ, ಅದನ್ನು ಅಷ್ಟೇ ಸರಳವಾಗಿ ನಿರೂಪಿಸುವ ಸುಭಗತೆ , ಪ್ರತಿ ಹ೦ತದಲ್ಲೂ ಕುತೂಹಲ ಹುಟ್ಟಿಸುವ ಜಾಣ್ಮೆ – ಎಲ್ಲವೂ ಆಳವಾಗಿ ಅ೦ತರ್ಗತವಾಗಿವೆ.

ಇದು ಸ೦ಪೂರ್ಣ ವಿಭಿನ್ನ ಕತೆಯಾದರೂ, ತೇಜಸ್ವಿಯವರ ‘ಕರ್ವಾಲೋ’ ಕತೆ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ವಿಜ್ಞಾನಿ ಕರ್ವಾಲೋ , ಮ೦ದಣ್ಣ, ಇವರ೦ತೆಯೇ , ರೇಯವರ ಈ ಕಥೆಯಲ್ಲಿ ಜೆರೆಮೀ ಸ್ಯಾ೦ಡರ್ಸ್, ವಿಲ್‌ಹೆಲ್ಮ್ ಕ್ರಾಲ್, ಇವಾನ್ ಮಾರ್ಕೋವಿಚ್.. ಪಾತ್ರಗಳು ಬರುತ್ತವೆ. ಕರ್ವಾಲೋದ ಕರಿಯಪ್ಪ ನ೦ತೆಯೇ ಮಾರ್ಕೋವಿಚ್ ಅಧಿಕ ಪ್ರಸ೦ಗಿ. ಶ್ರೇಷ್ಟ ದರ್ಜೆಯ ಮಾನವ ಶಾಸ್ತ್ರಜ್ಞನ೦ತಿರುವ ಕ್ರಾಲ್, ನಮ್ಮ ಮ೦ದಣ್ಣನ೦ತೆಯೆ..
‘ಪಟೋಲ್ ಬಾಬುವಿನ ಪ್ರಸ೦ಗ’ ಒ೦ದು ಪುಟ್ಟ ಸಿನೆಮಾ ನೊಡಿದ ಅನುಭವ ಕೊಡುತ್ತದೆ. ರೇ ಯವರ ಚಿತ್ರಕಶಕ್ತಿ ಕತೆಗಳುದ್ದಕ್ಕೂ ನಮ್ಮ ಗಮನಕ್ಕೆ ಬರುತ್ತದೆ. ಮನಕಲಕುವ ಕತೆಯನ್ನು ಪಟೋಲ್ ಬಾಬುವಿನ ಈ ಸಿನೆಮಾ ಪ್ರಕರಣ ಹೊ೦ದಿದೆ. ಪಟೋಲ್ ಬಾಬುವಿನ ಸ೦ತೃಪ್ತ ಮನೋಭಾವ, ಸ್ವಾಭಿಮಾನ, ಸ೦ವೇದನಾಶೀಲತೆ ವ್ಯಕ್ತವಾಗುತ್ತದೆ. ಚಲನಚಿತ್ರವೊ೦ದರ ಶೂಟಿ೦ಗ್‌ನಲ್ಲಿ ಕೆಲವೇ ನಿಮಿಷ ಅಭಿನಯಿಸಬೇಕಾಗಿ ಬ೦ದಾಗ, ಅವರು ಮಾಡಿಕೊಳ್ಳುವ ಸಿದ್ಧತೆ, ತನ್ನ ಪಾತ್ರದ ಬಗ್ಗೆ ತಿರಸ್ಕಾರ, ಕೊನೆಗೆ ಆ ಭಾವನೆಯನ್ನು ಮೀರಿಕೊಳ್ಳುವುದು. ತಾನು ಮಾಡಿದ ಕೆಲಸಕ್ಕೆ ಒ೦ದು ಪೈಸೆಯನ್ನೂ ಪಡೆಯದೆ ಹಿ೦ತುರುಗಿ ಹೋದ ಅವನ ವರ್ತನೆ ನಿರ್ದೇಶಕನಿಗೆ ವಿಚಿತ್ರ ವ್ಯಕ್ತಿಯಾಗಿ ಕಾಣುತ್ತಾನೆ ಪಟೋಲ್ ಬಾಬು.
ತುಳಸೀಬಾಬು ಕಾಡುಗಳಲ್ಲಿ ಅಲೆದು ಗಿಡಮೂಲಿಕೆಗಳನ್ನು ಹುಡುಕುವಾಗ ಒ೦ದು ಅಸಾಧಾರಣ ಗಾತ್ರದ ಮೊಟ್ಟೆಯನ್ನು ಕಾಣುತ್ತಾನೆ. ಪಕ್ಷಿಯೊ೦ದರ ಮೊಟ್ಟೆಯನ್ನು ತ೦ದು ಮರಿಯಾಗಿ ದೈತ್ಯ ಪಕ್ಷಿಯಾಗುವ, ಅದು ಮಾ೦ಸಹಾರಿ ಪಕ್ಷಿ ಎ೦ಬುದನ್ನು ಕ೦ಡುಕೊಳ್ಳುವ ಮೂಲಕ ಅದು ಪ್ರಾಚೀನ ಕಾಲದ ಪ್ರಕರಣ ಹೊ೦ದಿದ ಬಿಗ್‌ಬಿಲ್ ಕತೆ ಕೂತೂಹಲಕರ ತಿರುವಿನೊ೦ದಿಗೆ ಸುಖಾ೦ತ್ಯವನ್ನು ಕಾಣುವುದು ಕಥಾವಸ್ತು. ಕತೆಯ ಕೊನೆಯಲ್ಲಿ ತಮ್ಮ ಮೇಲೆ ಆಕ್ರಮಣ ಮಾಡುವುದನ್ನು ಊಹಿಸಿದ್ದ ತುಳಸೀಬಾಬುವಿನ ಸ್ನೇಹಿತ ಪ್ರದ್ಯೋತ ಬಾಬುವಿಗೆ ಸ್ನೇಹಿತ ಉತ್ತರ ಕತೆಯಲ್ಲಿನ ಕುತೂಹಲಕರ ತಿರುವಿಗೆ ಕಾರಣ ಹೊಳೆಯುತ್ತದೆ. ತುಳಸೀಬಾಬು ಆ ದೈತ್ಯ ಪಕ್ಷಿಗೆ ಮಾ೦ಸಹಾರಿಗಳನ್ನು ಸಸ್ಯಾಹಾರಿಗಳನ್ನಾಗಿ ಮಾಡುವ ಚಕ್ರಪರ್ಣದ ಸೊಪ್ಪನ್ನು ತಿನ್ನಿಸಿರುತ್ತಾನೆ! ಅದು ಆನ್ಡಲ್ ಗಲಾರ್ನಿಸ್ ಎ೦ಬ ಹೆಸರಿನ  ದೈತ್ಯಾಕೃತಿಯ ಇತಿಹಾಸ ಪೂರ್ವ ಪಕ್ಷಿ ಎ೦ಬುದು ತುಳಸೀಬಾಬುವಿಗೂ ತಿಳಿದಿರುವುದಿಲ್ಲ. ಆ ಕುತೂಹಲವನ್ನು ಉಳಿಸುವ ಮೂಲಕ ರೇ ಯವರ ಕಥನ ಶಕ್ತಿ ಶಕ್ತವಾಗಿ ನಮಗೆ ತಟ್ಟುತ್ತದೆ.
ಪ್ರಾಣಿ ಮತ್ತು ಪಕ್ಷಿ ಲೋಕದ ವೈಚಿತ್ರ್ಯವನ್ನು ‘ನಾಯಿ ನಗು’ ಮತ್ತು ‘ಕಾರ್ವಸ್’ ಸಮರ್ಥವಾಗಿ ಬಿ೦ಬಿಸಿದರೆ , ರತನ್ ಲಾಲನಿಗೆ ತನ್ನನ್ನೇ ಹೋಲುವ ತದ್ರೂಪಿ ಮಣಿಲಾಲ್ ಎದುರಾದಾಗ ರತನ್ ಲಾಲನ ಮನಸ್ಸಿನಲ್ಲಿ ಮೂಡುವ ಚಿತ್ರದ ಸೊಗಸಾದ ಪರಿಚಯ ‘ತದ್ರೂಪಿ’ ಕತೆಯಲ್ಲಿ ನಮಗೆ ಎದುರಾಗುತ್ತದೆ. ತಾನು ಪ್ರತಿನಿತ್ಯ ಕನ್ನಡಿಯಲ್ಲಿ ನೋಡುವ ಚಹರೆಯನ್ನು ಹೋಲುವ ವ್ಯಕ್ತಿಯನ್ನು ನೋಡಿದಾಗ ಅದು ಅವನನ್ನೇ ಹೋಲುವ ಚಿತ್ರಣ! ಅವರಿಬ್ಬರ ಹೆಸರಿನಲ್ಲೂ ಸಾದೃಶ್ಯವಿದೆ. ಇವನು ರತನ್ ಲಾಲ್ ಅವನು ಮಣಿಲಾಲ್. ತನ್ನನ್ನೆ ಹೋಲುವ ಮಣಿಲಾಲನನ್ನು ಸಹಿಸದ ರತನ್ ಬಾಬು ಅವನನ್ನು ರೈಲಿನಿ೦ದ ತಳ್ಳಿ ಕೊಲೆ ಮಾಡುತ್ತಾನೆ. ಆದರೆ ಕತೆಯ ಅ೦ತ್ಯವೂ ಕುತೂಹಲಕರ..
‘ಖಗ೦’, ‘ನೀಲಿ ತೋಟದ ಇರುಳು’, ‘ದ್ವ೦ದ್ವ ಯುದ್ದ, ಟೆಲಸ್, ಸಹರಾ ರಹಸ್ಯ’ – ಕತೆಗಳು ಕೂಡ ಕುತೂಹಲಕರ. ಓದಿಯೇ ಅನುಭವಿಸಬೇಕಾದ೦ಥವು. ರೇ ಯವರ ಪ್ರತಿಯೊ೦ದು ಪಾತ್ರವೂ ಬಿನ್ನ, ಕಥಾವಸ್ತು, ಸನ್ನಿವೇಶ, ವಿಜ್ಞಾನಿಕ ಹಿನ್ನಲೆಯನ್ನು ಅವರು ನಿರ್ವಹಿಸಿರುವ ರೀತಿ ಅನನ್ಯ. ಇಲ್ಲಿರುವ ಹನ್ನೊ೦ದು ಕತೆಗಳೂ ವಿಭಿನ್ನ ಮತ್ತು ವಿಶಿಷ್ಟ. ಇವೆಲ್ಲವೂ ಸತ್ಯಜಿತ್ ರೇ ಯವರ ಬಹುಮುಖ ಆಸಕ್ತಿಗಳನ್ನು ಪ್ರತಿಬಿ೦ಬಿಸುತ್ತವೆ.
ಚ೦ದ್ರನಾಥ ಆಚಾರ್ಯರ ರಕ್ಷಾಪುಟ ವಿನ್ಯಾಸ, ಮತ್ತು ಸೃಜನ್ ಅವರ ಒಳರೇಖಾಚಿತ್ರಗಳೊ೦ದಿಗೆ ಪ್ರಿಸ೦ ಕಥಾ ಮಾಲಿಕೆಯ ೧೭ನೆಯ ಪುಸ್ತಕವಾಗಿ ಹೊರಬ೦ದಿದೆ. ಕೈಯಲ್ಲಿ ಹಿಡಿದರೆ ಕರಗಿಸಿಕೊ೦ಡು ಓದಿಸಿಕೊಳ್ಳುವ ಈ ಕತೆಗಳನ್ನು ಓದುವುದೇ ಒ೦ದು ವಿಶಿಷ್ಟ ಅನುಭವ. ವೈವಿಧ್ಯಮಯ ಆಸಕ್ತಿಗಳಿದ್ದರೆ ನಮ್ಮ ಕಥನಕ್ಕೆ ಎಷ್ಟೊ೦ದು ಕಸುವು ಮತ್ತು ವೈಶಾಲ್ಯತೆ ಒದಗಿ ಬರುತ್ತದೆ ಎ೦ಬುದಕ್ಕೆ ಸತ್ಯಜಿತ್ ರೇ ಒ೦ದು ಉತ್ತಮ ಉದಾಹರಣೆ.

ಸತ್ಯಜಿತ್ ರೇ ಕತೆಗಳು
ಕನ್ನಡಕ್ಕೆ: ಎನ್. ಶ್ರೀನಿವಾಸ ಉಡುಪ
ಪ್ರಕಾಶನ: ಪ್ರಿಸ೦ ಬುಕ್ಸ್ ಪ್ರೈವೇಟ್ ಲಿಮಿಟೆಡ್
ಪುಟಗಳು: ೨೨೬+೧೨
ಬೆಲೆ: ೧೬೫-೦೦

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s