ಹೋರಾಟಕ್ಕೆ ರೆಡಿನಾ ಸುನಂದಕ್ಕ? (ಭಾರತಿ ಹೆಗಡೆ ಬರಹ)

ಭಾರತಿ ಹೆಗಡೆ
ಮೊನ್ನೆ ಕಾವೇರಿ ಗಲಾಟೆಯ ಕಾವು ಇಡೀ ರಾಜ್ಯದಲ್ಲಿ ಜೋರಾಗಿಯೇ ಇತ್ತು.ಹಲವೆಡೆ ಪ್ರತಿಭಟನೆ, ಬಸ್ಸಿಗೆ ಬೆಂಕಿ, ಗಲಾಟೆಗಳೆಲ್ಲ ಆದವು. ಆದರೆ ಮಂಡ್ಯ ಮದ್ದೂರು ರಸ್ತೆಯಲ್ಲಿ ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ಒಂದು ಸ್ಟೌವ್ ಇಟ್ಟರು,ತರಕಾರಿ ಅಲ್ಲಿಯೇ ಹೆಚ್ಚಿದರು,ಅಲ್ಲಿಯೇ ಅಡುಗೆ ಮಾಡಿದರು,ಅಲ್ಲಿಯೇ ಕೂತು ಊಟ ಮಾಡಿದರು. ರಸ್ತೆಯಲ್ಲಿಯೇ ಅಡುಗೆ ಮಾಡಿ, ಬಸ್ ತಡೆ ಹಿಡಿದು ತಣ್ಣಗೆ ಪ್ರತಿಭಟನೆ ಮಾಡಿದರು. ಅವರ ಹಿಂದೆ ಸಾವಿರಾರು ಜನ ಜಮಾಯಿಸಿದರು, ಅವರೂ ತಣ್ಣಗೆ ಮೌನ ಹೋರಾಟ ಮಾಡಿದರು.
ಸುನಂದಾ ಜಯರಾಮ್ ಅವರ ಶಕ್ತಿಯೇ ಅಂಥದ್ದು. ಅವರು ಪ್ರತಿಭಟನೆಯ ಆಖಾಡಾಕ್ಕಿಳಿದರೆ ಅಲ್ಲಿ ಕೂಗಾಟವಿಲ್ಲ, ಹೊಡೆದಾಟವೂ ಇಲ್ಲ,ತಮ್ಮ ಸರಳ ನಡವಳಿಕೆ,ಸರಳ ಮಾತುಗಳ ಮೂಲಕವೇ ಜನರನ್ನು ಗೆಲ್ಲುವಂಥ ಮನೋಭಾವ.
ನಾನೊಬ್ಬಳು ರೈತ ಮಹಿಳೆ. ತವರು ಮನೆ ರೈತ ಕುಟುಂಬ, ಗಂಡನ ಮನೆಯೂ ರೈತ ಕುಟುಂಬ. ಹಾಗಾಗಿ ನಾನೊಬ್ಬ ರೈತ ಮಹಿಳೆ. ನಾನು ಓದಿದ್ದು ಎಸ್ಸೆಸ್ಸೆಲ್ಸಿ. ಅರಕೆರೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ನನ್ನ ತಾಯಿಮನೆ. ತಾಯಿ ಪುಟ್ಟಮ್ಮ, ತಂದೆ ಅಣ್ಣೇಗೌಡ. ದೊಟ್ಟ ಕುಟುಂಬ ನಮ್ಮದು. ಮೊದಲಿನಿಂದಲೂ ಸರಳತೆ ನನ್ನಲ್ಲಿತ್ತು. ಅದು ವಿಕಸಿತಗೊಂಡಿದ್ದು ಮಾತ್ರ ಜಯರಾಮ್ ಅವರಿಂದ ಎಂದು ಸುನಂದಾ ತಮ್ಮ ಬದುಕಿನ ತಿರುವುಗಳನ್ನು ಮೆಲುಕು ಹಾಕುತ್ತಾರೆ.
ನನ್ನ ಮದುವೆ ನನ್ನ ಜೀವನದ ತಿರುವು ಕೊಟ್ಟಂಥದ್ದು. ಅಲ್ಲಿವರೆಗೆ ನಾನೊಬ್ಬ ಸಾಮಾನ್ಯ ಮಹಿಳೆ. ಈಗಲೂ ನಾನು ಸಾಮಾನ್ಯಳೇ. ಆದರೆ ನಾನೊಬ್ಬಳು ಚಳವಳಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದದ್ದು, ಈ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದದ್ದು ನನ್ನ ಮದುವೆ.
ಅದು ೧೯೮೫- ೮೬ರ ಅವಽ. ಆಗ ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದರು. ಅದೇ ಸಮಯದಲ್ಲಿ ರೈತರ ಮೇಲೆ ಗೋಲಿಬಾರ್ ನಡೆಯಿತು. ನಮ್ಮ ಮಂಡ್ಯದಲ್ಲಿ ಇಬ್ಬರು ರೈತರು ಆ ಸಮಯದಲ್ಲಿ ತೀರಿಕೊಂಡರು. ಆಗಿನಿಂದಲೇ ಇಲ್ಲಿ ರೈತ ಚಳವಳಿ ಉಗ್ರ ಸ್ವರೂಪ ಪಡೆದುಕೊಂಡಿತು. ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಚಳವಳಿ ಪ್ರಾರಂಭವಾಗಿದ್ದು ಆ ಹಂತದಲ್ಲಿ.
ಆಗಿನ್ನೂ ನನಗೆ ಮದುವೆಯಾದ ಹೊಸತು.ಜಯರಾಮ್ ಸಮಾಜವಾದಿ ಚಿಂತನೆಗಳ ಮೂಸೆಯಲ್ಲಿ ಬಂದವರು. ಹಾಗಾಗಿ ನನಗೂ ಅವರಿಂದ ಸಮಾಜವಾದಿ ಚಿಂತನೆಗಳೇ ಹರಿದು ಬಂತು. ಆ ಹೊತ್ತಲ್ಲಿ ಮಹಿಳೆಯರೂ ಚಳವಳಿಗೆ ಭಾಗವಹಿಸಬೇಕು. ಅವರು ಬರದೇ ಇದ್ರೆ ಚಳವಳಿಯ ಆಶಯ ಸ-ಲವಾಗಲ್ಲ ಅಂತ ನಂಜುಂಡ ಸ್ವಾಮಿ ಕರೆ ನೀಡಿದರು.ಆಗ ನಮ್ಮಲ್ಲಿ ಅನೇಕ ಮಹಿಳೆಯರು ಈ ರೈತ ಚಳವಳಿಯಲ್ಲಿ ಭಾಗವಹಿಸಿದರು. ಹಾಗೆ ನಾನು ಕೂಡ ಬಂದೆ ಎಂದು ಹೇಳುತ್ತ ಸುನಂದ ಜಯರಾಮ್ ತಮ್ಮ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಸೀರೆ ಉಟ್ಟು ಸೆರಗು ಹೊದ್ದು ಥೇಟು ನಮ್ಮ ಮನೆಯ ಅತ್ತಿಗೆಯೋ ಅಕ್ಕನೋ ನೆನಪಿಸುವ ಸುನಂದ ಪಕ್ಕಾ ಹಳ್ಳಿ ಮಹಿಳೆ. ಚಿಂತನೆಯ ವಿಸ್ತಾರ ಮಾತ್ರ ಹಳ್ಳಿ, ಪಟ್ಟಣಗಳನ್ನೂ ಮೀರಿ ನಿಲ್ಲುವಂಥದ್ದು.ಓದಿದ್ದು ಕೇವಲ ಎಸ್ಸೆಸ್ಸೆಲ್ಸಿಯಾದರೂ ಯಾವ ಉನ್ನತ ಓದಿಗೂ ಸಮನಾಗಿ ನಿಲ್ಲಬಲ್ಲಂಥ ವಿಚಾರಗಳು ಎಂಥವರನ್ನೂ ದಂಗುಬಡಿಸಬಲ್ಲವು.
ನಮ್ಮ ಚಿಂತನೆಗಳು ಸ್ಪಷ್ಟವಿದ್ದರೆ, ನಮ್ಮ ವಿಚಾರಗಳು ಸರಿಯಾಗಿದ್ದರೆ ಎಂಥವರೂ ನಮ್ಮನ್ನು ಗೌರವಿಸುತ್ತಾರೆ. ಮಹಿಳೆ ಅನ್ನುವಂಥ ಯಾವ ಭೇದಭಾವವೂ ಅಲ್ಲಿ ಬರೋದಿಲ್ಲ, ರಾತ್ರೋರಾತ್ರಿ ಹಳ್ಳಿ ಹಳ್ಳಿಗೆ ಹೋಗಿ ತಿರುಗಿದ್ದೇನೆ. ಅದೆಂಥದ್ದೇ ದೊಡ್ಡ ಚಳವಳಿ ಇರಲಿ. ಅದರಲ್ಲಿ ಧುಮುಕಿದ್ದೇನೆ. ಆದರೆ ಜನ ನನ್ನ ತುಂಬ ಗೌರವದಿಂದಲೇ ನೋಡಿಕೊಂಡಿದ್ದಾರೆ. ನನ್ನ ನೈತಿಕತೆಯೇ ನನಗೆ ಕೊಟ್ಟ ಧೈರ್ಯ ಎಂದು ಕಡಕ್ಕಾಗಿ ಹೇಳುವ ಸುನಂದಾ ಈಗಲೂ ನಂಬುವುದು ಜನಶಕ್ತಿಯನ್ನು,ಚಳವಳಿಯನ್ನು, ಅದೂ ಸೈದ್ಧಾಂತಿಕ ಹಿನ್ನೆಲೆಯಲ್ಲೇ ಎಲ್ಲವನ್ನೂ ಸಾಽಸಲು ಸಾಧ್ಯ ಎಂದೇ ನಂಬಿದವರು.
ಈ ಮೊದಲು ೯೮-೨೦೦೧ರವರೆಗೆ ಜಿಲ್ಲಾ ಸಾಕ್ಷರತಾ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯಾಗಿದ್ದರು. ೨೦೦೦-೦೮ರವರೆಗೆ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು. ನಂತರ ನಾನು ರಾಜಕೀಯವಾಗಿ ಬೆಳೆಯಲಿಲ್ಲ. ಯಾಕೆಂದರೆ ಅದರ ರಾಜಕೀಯ ನನಗಿಷ್ಟವಾಗಲಿಲ್ಲ. ಹಾಗಾಗಿ ರೈತ ಚಳವಳಿಯಲ್ಲೇ ಮುಂದುವರೆದೆ. ಸಮಾಜ ನನ್ನನ್ನು ಎಳಕೊಳ್ತೋ, ನಾನು ಸಮಾಜಕ್ಕೆ ಬಂದ್ನೋ ಎಂಬುದು ನನಗಿವತ್ತಿಗೂ ಗೊತ್ತಿಲ್ಲ. ಆದ್ರೆ ನನಗೆ ವೈಯಕ್ತಿಕ ಬದುಕೆಂಬುದಿಲ್ಲ ಎನ್ನುತ್ತಾರೆ.
ರೈತ ಚಳವಳಿ, ಭಾಷಾ ಚಳವಳಿ, ದಲಿತ ಚಳವಳಿ ಹೀಗೆ ಹತ್ತು ಹಲವು ಚಳವಳಿಗಳಲ್ಲಿ ತಮ್ಮ ನ್ನು ತೊಡಗಿಸಿಕೊಂಡವರು. ದೇಶದ ಪ್ರಗತಿ ಏನಿದ್ದರೂ ಅದು ಕೃಷಿಯಿಂದ ಮಾತ್ರ ಸಾಧ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಾ ಬಂದಂಥವರು. ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಇರಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯ. ಮಾನವಾಭಿವೃದ್ಧಿ ಕೂಡ ಈ ಅಭಿವೃದ್ಧಿಯ ಒಳಗೇನೇ ಇರುವಂಥದ್ದು.
ಶೇ.೭೦ರಷ್ಟು ನಮ್ಮಲ್ಲಿ ಕೃಷಿ ಭೂಮಿ ಇದೆ. ಕೃಷಿ, ಬೆಳೆ ಇಲ್ದೆ ನಮ್ಮ ಸಮಾಜ ಇಲ್ಲ. ಇದನ್ನು ನಮ್ಮ ಜನ, ನಮ್ಮ ಸರ್ಕಾರ ಮೊದಲು ಅರಿತುಕೊಳ್ಳಬೇಕು. ಆದರೆ ಅದನ್ನು ಅರಿಯುತ್ತಿಲ್ಲ. ಹಾಗಾಗಿಯೇ ಇವತ್ತು ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಆಹಾರೋತ್ಪನ್ನಗಳೂ ಕಡಿಮೆಯಾಗುತ್ತಿದೆ. ಭಾರತವನ್ನು ಉಳಿಸಿದ್ದು ಬೆಳೆಸಿದ್ದು ಕೃಷಿಯೇ. ೬೦ರ ದಶಕದಲ್ಲಿ ಹಸಿರು ಕ್ರಾಂತಿ ಬಂದಾಗ ಹೈಬ್ರಿಡ್ ತಳಿಗಳು ಬಂದವು. ಅವು ಕೃಷಿ ಭೂಮಿಗೆ ಪರಿಚಯ ಆಯ್ತು. ಇದರ ಮೂಲಕವೇ ಇಡೀ ದೇಶಕ್ಕೆ ಆಹಾರ ಒದಗಿಸಲು ಸಾಧ್ಯವಾಯಿತು. ಆದರೆ ಈಗ ನಾವು ವಾಪಾಸು ಆ ಹಸಿರನ್ನು ತೆಗೆದುಕೊಳ್ಳೋದೇ ಕಷ್ಟವಾಗಿದೆ. ಈ ಹಸಿರು ಮತ್ತೆ ವಾಪಾಸು ನಮಗೆ ಸಿಗಬೇಕು. ಇಂದು ನಮ್ಮ ಕೃಷಿ ಭೂಮಿ ನಾಶವಾಗ್ತಾ ಇದೆ, ಆಹಾರೋತ್ಪನ್ನಗಳೇ ಕಡಿಮೆಯಾಗುತ್ತಿವೆ. ಮುಂದೊಂದು ದಿನ ಆಹಾರ ಸಮಸ್ಯೆ ಭೀಕರವಾಗಿ ನಮ್ಮನ್ನು ಕಾಡುತ್ತದೆ.
ಇದರ ಜೊತೆಗೆ ನಮ್ಮಲ್ಲಿ ರೈತ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹಾಲಿಗೆ ಸರಿಯಾದ ಮಾರುಕಟ್ಟೆಯ ವ್ಯವಸ್ಥೆಯಿದೆ. ಅದೇ ರೀತಿ ನಮ್ಮ ಬೆಳೆಗಳಿಗೂ ಯಾಕಿಲ್ಲ. ಇವನ್ನೆಲ್ಲ ಮಾಡಬೇಕಾದ ಸರ್ಕಾರ ಯಾಕಿನ್ನೂ ಮೌನವಾಗಿ ಕೂತಿದೆ. ರೈತರ ವಿಷಯದಲ್ಲಿ ಸರ್ಕಾರಕ್ಕೆ ಯಾಕೆ ಇಂಥ ಮೌನವಹಿಸುತ್ತದೆ. ಇಂಥ ಅನೇಕ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗುವ ಸುನಂದಾ ರೈತ ಸಂಘದಲ್ಲಿದ್ದೂ ಗುಂಪಿನಲ್ಲಿ ಗುರುತಿಸಿಕೊಳ್ಳದೇ ತಮ್ಮದೇ ಹಾದಿಯಲ್ಲೇ ತಣ್ಣಗೆ ಚಳವಳಿಗೆ ಧುಮುಕಿದವರು.

ಇವತ್ತೇಕೆ ಚಳವಳಿಗಳು ಕಡಿಮೆಯಾಗುತ್ತಿವೆ-
ಚಳವಳಿಗಳು ಇಂದಿನ ದಿನಗಳಲ್ಲಿ ಅರ್ಥವನ್ನೇ ಕಳೆದುಕೊಳ್ಳುತ್ತಿವೆಯಾ ಎಂದು ಕೇಳಿದರೆ ಯಾವತ್ತು ಸಮಸ್ಯಾಧಾರಿತ ಚಳವಳಿ ಇದ್ದರೆ ಅಂಥ ಚಳವಳಿ ಖಂಡಿತ ಉಳಿಯುತ್ತದೆ. ಆದರೆ ಈಗ ಚಳವಳಿ ಸಮಸ್ಯಾಧಾರಿತವಾಗಿಲ್ಲ, ಅದು ವ್ಯಕ್ತಿಯಾಧಾರಿತವಾಗಿದೆ. ಚಳವಳಿ ವ್ಯಕ್ತಿಗತವಾಗಿದ್ರೆ ಅಂಥ ಚಳವಳಿ ಖಂಡಿತ ಸೋಲುತ್ತದೆ. ಚಳವಳಿ, ಸಂಘಟನೆ, ಹೋರಾಟ, ಇವೆಲ್ಲ ಬಹು ವಿಶಾಲವಾದದ್ದು. ಯಾರಿಗೂ ಈಗ ಇವೆಲ್ಲ ಬೇಕಾಗಿಲ್ಲ. ಚಳವಳಿಗೊಂದು ಗಂಭೀರತೆಯೇ ಇಲ್ಲದಂತಾಗಿದೆ. ಸಾಮೂಹಿಕ ನಾಯಕತ್ವ ಯಾವ ಸ್ಥಳದಲ್ಲಿ ನೋಡ್ತೀವೋ ಅಂಥ ಚಳವಳಿಗಳೆಲ್ಲ ಯಶಸ್ವೀಯಾಗಿದೆ. ಅಲ್ಲೊಂದು ಸಮಾನತೆ ಬೇಕು. ಇದೇ ನನ್ನ ಬದುಕಿನ ಮಂತ್ರ, ತಂತ್ರ.

ಮೊದಲೆಲ್ಲ ಮಹಿಳೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಕೃಷಿಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಳು. ಈ ಮೂಲಕ ಅವಳೇ ಸ್ವಾವಲಂಬಿಯಾಗಿದ್ದಳು. ಈಗ ತಾನು ಸಮರ್ಥಳು, ಎಂಥ ಕೆಲಸವನ್ನೂ ನಿಭಾಯಿಸಬಲ್ಲೆ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಬೇಕಾಗಿದೆಯಲ್ಲ. ಅದು ಈ ಸಮಾಜದ ದೊಡ್ಡ ದುರಂತ. ಒಬ್ಬ ಪುರುಷ ತಾನು ಇಂಥ ಕೆಲಸ ಮಾಡಬಲ್ಲೆ ಎಂದು ಹೇಳಿಕೊಳ್ಳುವ ಅಗತ್ಯವಿಲ್ಲದ ಮೇಲೆ ಮಹಿಳೆಗೂ ಅದರ ಅಗತ್ಯವಿರಕೂಡದಲ್ಲವೇ? ಮಹಿಳೆ ಯಾವತ್ತೂ ವೈಚಾರಿಕವಾಗಿ ಬೆಳೆಯಬೇಕು. ಆಗ ಮಾತ್ರ ಅವಳ ಸಮಸ್ಯೆ ನಿವಾರಣೆಯಾಗಲು ಸಾಧ್ಯ. ಅವಳೇನೇ ಮಾಡಲಿ ಅಲ್ಲೊಂದು ಸ್ವಂತಿಕೆ ಇರಬೇಕು. ಕುಟುಂಬ ನಿರ್ವಹಣೆ ಮಹಿಳೆಗೆ ಸುಲಭ ಕೆಲಸವಲ್ಲ. ಈಗಂತೂ ಮಹಿಳೆ ಒಳಗೂ ಹೊರಗೂ ದುಡಿವ ಅನಿವಾರ್ಯತೆ ಇದೆ. ಅಂಥ ಸಂದರ್ಭದಲ್ಲಿ ಟೈಮ್ ಮ್ಯಾನೇಜ್‌ಮೆಂಟ್ ಎಂಬುದು ಇಲ್ಲಿ ತುಂಬಾ ಮುಖ್ಯ. ಜೊತೆಗೆ ಕುಟುಂಬದ ಇತರೆಲ್ಲ ಸದಸ್ಯರ ಸಹಕಾರವೂ ಅಷ್ಟೇ ಮುಖ್ಯ.

ಕಾವೇರಿ ಕುಟುಂಬ –
ಕಾವೇರಿ ಜಗಳ ಸದಾ ಕಾವಿನಲ್ಲೇ ಇರುತ್ತದೆ. ನಿಜವಾದ ಸಮಸ್ಯೆಯೇನು ಎಂಬುದು ಯಾರಿಗೂ ಬೇಕಿಲ್ಲ. ಎಮ್‌ಐಡಿಎಸ್ ಸಂಸ್ಥೆ ನೇತೃತ್ವ ದಲ್ಲಿ, ಜವಾಬ್ದಾರಿ ತಗೊಂಡು ಎರಡೂ ರಾಜ್ಯಗಳ ರೈತರ ಒಂದು ಕುಟುಂಬ ಅಂತ ಮಾಡಿಕೊಂಡಿದೀವಿ. ಎರಡೂ ರೈತರು ಪರಸ್ಪರ ಅರ್ಥ ಮಾಡ್ಕೊಂಡಿದಾರೆ. ಅಲ್ಲಿನ ರೈತರು ಇಲ್ಲಿ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ.

ಸರಳ ಮದುವೆ ಮಾಡಿದ್ವಿ. – ಇದು ಮಂಡ್ಯದ ವಿಶೇಷ. ಮಂತ್ರ ಮಾಂಗಲ್ಯದ ಮೂಲಕ ಮದುವೆ ಮಾಡಿಸ್ತೀವಿ. ಇದಕ್ಕಾಗಿ ನಾನು ಮದುವೆಯ ಮಹತ್ವದ ಕುರಿತು ಭಾಷಣ ಮಾಡುತ್ತೇನೆ.ಇದರಡಿಯಲ್ಲಿ ಸುಮಾರು ೨೦ ಸಾವಿರ ಮದುವೆ ಮಾಡಿಸಿದ್ದೇವೆ.

ತಿಥಿ ಮಾಡಿ ಸಸಿನೆಡಿ –
ಇದು ನಮ್ಮ ವಿನೂತನ ಕಾರ್ಯಕ್ರಮ. ಯಾರೇ ತೀರಿಕೊಂಡರೂ ನಾವು ಊಟೋಪಚಾರ ಎಂದು ಮಾಡುವುದಿಲ್ಲ. ಬದಲಾಗಿ ಅವರ ನೆನಪಲ್ಲಿ ಸಸಿನೆಡುತ್ತೇವೆ ಹಾಗೂ ಬಂದವರೆಲ್ಲರಿಗೂ ಸಸಿಗಳನ್ನು ವಿತರಿಸುತ್ತೇವೆ. ನಮ್ಮ ಅತ್ತೆ ತೀರಿಕೊಂಡರು. ಅತ್ತೆ ಇರುವಾಗ ಅವರ ಸೇವೆ ಚೆನ್ನಾಗಿ ಮಾಡಿದೆವು. ತೀರಿದ ನಂತರ ನಾವೇನೂ ಮಾಡಲಿಲ್ಲ. ನಮ್ಮ ಮನೆಯಲ್ಲಿ ಮಿಕ್ಕವರು ಅದಕ್ಕಾಗಿಯೇ ದೊಡ್ಡರೀತಿಯಲ್ಲಿ ಅಡುಗೆ ಮಾಡಿ ನಾಲ್ಕು ಜನರನ್ನು ಕರೆದು ಊಟ ಹಾಕಿದರು. ನಾವದಕ್ಕೆ ಹೋಗಲೇ ಇಲ್ಲ. ಅದೇ ರೀತಿ ನಮ್ಮಮ್ಮ ತೀರಿಕೊಂಡಾಗಲೂ ಅಷ್ಟೇ. ಅಮ್ಮ ಹೋದಾಗ ಸರಳವಾಗಿ ಆಚರಿಸೋಣ ಎಂದರೆ ತವರು ಮನೆಯಲ್ಲಿ ಒಪ್ಪಲಿಲ್ಲ. ಮೈಸೂರು ಪಾಕು, ಅದೂ ಇದೂ ಎಂದು ಸ್ವೀಟ್ ಮಾಡಿ ದೊಡ್ಡದಾಗಿ ಆಚರಿಸಿದರು. ಅದಕ್ಕೂ ನಾನು ಹೋಗಲಿಲ್ಲ. ಹಾಗೊಮ್ಮೆ ಅಂಥ ಸಮಾರಂಭಕ್ಕೆ ನಾನು ಹೋಗಿದ್ದಿದ್ದರೆ ನಮ್ಮ ಸಿದ್ಧಾಂತಕ್ಕೆ ವಿರುದ್ಧವಾಗುತ್ತಿತ್ತು. ಮುಂದೆ ನಾವು ತೀರಿಕೊಂಡಾಗಲೂ ಅಷ್ಟೇ, ನಮಗೇನೂ ಬೇಡ, ನಮ್ಮ ಹೆಸರಿನಲ್ಲಿ ಗಿಡ ನೆಟ್ಟರೆ ಸಾಕು. ಮಗನ ಮದುವೆಯನ್ನೂ ನಾವು ತುಂಬ ಸರಳವಾಗಿಯೇ ಮಾಡಿದೆವು. ಈಗಲೂ ಅಷ್ಟೇ ಎಲ್ಲ ಕಡೆ ಹೋಗುತ್ತೇನೆ. ಅದು ಸರಳವಾಗಿದ್ದರೆ ಮಾತ್ರ.

ಪೂಜೆ ಮಾಡಲ್ಲ, ಪೋಟೋ ಇಟ್ಟಿಲ್ಲ
ನಾನು ಮನುಷ್ಯರನ್ನು ನಂಬುತ್ತೇನೆ. ಮನೆಯಲ್ಲಿ ಪೂಜೆ ಮಾಡೋದಿಲ್ಲ. ಕೆಲಸವನ್ನು ಪ್ರೀತಿಸುತ್ತೇನೆ. ನನ್ನ ಮನೆಯಲ್ಲಿ ಯಾವ ದೇವರ -ಪೋಟೋ ವೂ ಇಲ್ಲ, ದೇವರ ಪೂಜಾ ಮಂದಿರವೂ ಇಲ್ಲ. ಯಾವ ಸಂಪ್ರದಾಯವನ್ನೂ ನಾನು ಆಚರಿಸೋದಿಲ್ಲ. ಹಬ್ಬ ಹರಿದಿನಗಳನ್ನೂ ನಾನು ಮಾಡೋದಿಲ್ಲ. ಕೆಲಸ, ಸಮಾಜ, ಚಳವಳಿ, ಹೋರಾಟ ಇವೇ ನನ್ನ ಮಂತ್ರ. ಮನುಷ್ಯ ಧರ್ಮವೇ ಎಲ್ಲಕ್ಕಿಂತ ದೊಡ್ಡದು ಎಂದು ನಂಬಿರುವವಳು ನಾನು.
ಜಾಗತೀಕರಣದಿಂದ ಕೃಷಿ, ರೈತ, ಮಹಿಳೆ, ಆರೋಗ್ಯ, ಆಹಾರ, ಅರ್ಥವ್ಯವಸ್ಥೆ ಮೇಲೆ ನೇರ ಹೊಡೆತ ಬಿದ್ದಿದೆ. ಇದನ್ನು ಚಳವಳಿಗಳೂ ಅರ್ಥ ಮಾಡಿಕೊಂಡಿಲ್ಲ. ಸರ್ಕಾರಕ್ಕೆ ಬೇಕಿಲ್ಲ. ಇದನ್ನು ಸರಿಪಡಿಸದೇ ರೈತರಿಗೆ ಅನ್ಯಾಯ ಎಂದು ಕೂಗೋದ್ರಿಂದ ಯಾವ ಪ್ರಯೋಜನವೂ ಇಲ್ಲ.
ಹೀಗೆ ಕೃಷಿ, ಮಹಿಳೆ ಇಲ್ಲದೇ ಸಮಾಜವಿಲ್ಲ ಈ ಎರಡೂ ಸ್ವಸ್ಥವಾಗಿದ್ದಾಗ ಮಾತ್ರ ಈ ಸಮಾಜ ಸ್ವಸ್ಥವಾಗಬಲ್ಲದು ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಾರೆ ಸುನಂದಾ ಜಯರಾಮ್.
-ವಿಜಯವಾಣಿ ಯಲ್ಲಿ “ವಾರದ ಮಹಿಳೆ” ವಿಭಾಗದಲ್ಲಿ ಪ್ರಕಟವಾದ’ ರೈತ ನಾಯಕಿ ಸುನಂದಾ ಜಯರಾಮ್’ ಬಗ್ಗೆ ಭಾರತಿ ಹೆಗಡೆ ಬರೆಹ:

Advertisements

ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು (ಕೆ.ಪಿ. ಮೃತ್ಯುಂಜಯ)

ಅಷ್ಟು ಸಂತಸದ ಮುಖ; ಮುಖಸಿರಿ ಧರಿಸಿದ ಮೇಲೆ
ಪರಮ ಸಂತೋಷ.
ಕಣ್ಣು ಧರಿಸುವ ಘಳಿಗೆ ಹಿಡಿದ ಪರದೆ ;
ಪರದೆ ಮರೆಯಲಿ ಮಹಾಮಗ್ನ
ಅಯ್ಯ. ಊರ ಜನ ಇಡಿಕಿರಿದ ಕಿರಿದು ಮನೆ
ಯಲ್ಲಿ ಉಸಿರು ಬಿಗಿಹಿಡಿದ ದೊಡ್ಡ ಮೌನ.
ಇಷ್ಟಗಲ ತೇಜಃಪುಂಜ ಮುಖಸಿರಿ ಕಣ್ಣುಗಳಿಗೆ
ಕಪ್ಪಿಟ್ಟು ತಿದ್ದಿ ರಜಸ್ಸುಗೊಳಿಸಿದ ಮೇಲೆ
ದೃಷ್ಟಿಬೊಟ್ಟು ಇಟ್ಟಾಯಿತೆಂಬ ನಿರಾಳ.
ಈಗ ಮೂರ್ತಿಗೆ ಪೂರ್ತಿ ಭಾವ ;
ಭಾವಕ್ಕೆ ತಕ್ಕ ಭಂಗಿ ನೀಡಿದ ಮೇಲೆ ಸರಿವ ಪರದೆ.

ಬೆಳಕು ಹೊಳೆಯಿಸುವ ದೇವತೆ ಕಂಡು
ಮಾತು ಎಲ್ಲರ ಬಾಯಲಿ ಹಂಗೇ ಹೂತು
ಬರೇ ಮಂದನಗೆ.
ಮಣ್ಣಿನಲಿ ಅವತಾರವೆತ್ತಿದ ದೇವತೆಗೆ
ಮಹಾಮಂಗಳಾರತಿ. ಘನತೆ, ಗೌರವಾರ್ಪಣೆ
ಅಯ್ಯಂಗಾರರ ಸಮೇತ ಅಯ್ಯನಿಗೆ.

ತಲತಲಾಂತರದ ಮಣ್ಣಿನುದ್ಭವ ಮನೆ
ಯ ನಡುವಿನಂಗಳದಿಂದ ಮೇಲೆದ್ದ ದೇವತೆಗೆ
ಜನತೆ ಹರ್ಷೋದ್ಗಾರ ಚೌಡಿಕೆ ಪದ ಸಂಚಾರ ;
ಸೋಮನ ಕುಣಿತಕ್ಕೆ ಆಡಿಕೆಯ ಕಗ್ಗ ಬೇರೆ.

ಮಂಗಳಕರ ಮಾತು ಮೀರಿ ಕೇಕೆ ಶಿಳ್ಳೆ ನಗೆ
ಉನ್ಮಾದದ ಮಧ್ಯೆ ದೇವತೆ
ತಿದ್ದಿದ ಕಲಾಕಾರನೀಗ ವಿರಕ್ತನ ರೀತಿ ನಿಸ್ಸಂಗಿ.
-೨-

ಅರೆ, ತಮಟೆ, ದೋಣು ಸದ್ದಿಗೆ ಕಹಳೆ ಮೊಳಗಿ
ಗೆ ಸಣ್ಣಗೆ ಕಂಪಿಸಿದ ಎದೆಯದುಮಿ
ಕೊಂಡು ಮೂಲೆಯಲಿ ಮುದುಡಿ
ನಿಂತ ಬಾಲನ ಕಣ್ಣಾಚೆಗೆ –
ಉಯ್ಯಲಾಡುವ ದೇವತೆಗೆ ತಲೆಬಾಗಿಲಲೆ
ಕೇಕೆಯಬ್ಬರದ ನಡುವೆ ಸಣ್ಣಗೆ
ಚೀತ್ಕರಿಸಿದ ಗೊಣ್ಣೆಕುರಿ ಮಚ್ಚಿನೊಂದೇ
ಹೊಡೆತಕ್ಕೆ ಫನಾ. ರುಂಡ-ಮುಂಡಕ್ಕೆ
ಮುಗಿಬಿದ್ದ ನಮ್ಮವರು ಕದ್ದು ಮರೆ
ಯಲ್ಲಿ ಪಾಲು ಮಾಡಿಕೊಳ್ಳಲು ಪರಾರಿ
ಯಾದದ್ದಷ್ಟೇ ಗೊತ್ತು.

ಬಲಿ ಪಡೆದು ನಗು-ನಗುತ ನಡೆ ಮುಡಿ
ಮೆರವಣಿಗೆ ಹೊರಟ ದೊಡ್ಡಮ್ಮ ದೇವತೆ ಖಾಲಿ
ಮಾಡಿದ ನಡುಮನೆಯಲ್ಲಿ
ವಿರಾಮ ಕುಳಿತ ಅಯ್ಯನ ಕಣ್ಣಲ್ಲಿ
ವಿಷಾದ ಯಾಕೆ ತುಂಬಿತ್ತು?

ತಲೆ ಬಾಗಿಲಲಿ ರಕ್ತದ ಬಿಸಿ
ಆಗ ತಾನೆ ಆರತೊಡಗಿತ್ತು.

-ಕೆ.ಪಿ. ಮೃತ್ಯುಂಜಯ

(ಕೆ.ಪಿ. ಮೃತ್ಯುಂಜಯ ಅವರ ಮಹತ್ವದ ಕವಿತೆ ಇದು ಎನ್ನುವುದು ನನ್ನ ಭಾವನೆ. ಇದುವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿ ಒಳ್ಳೆಯ ಕವಿ ಎನಿಸಿಕೊಂಡಿರುವ ಮೃತ್ಯುಂಜಯ, ಈಗ ಆರನೆಯ ಸಂಕಲನದ ನಿರೀಕ್ಷೆಯಲ್ಲಿದ್ದಾರೆ.)

(ಹೌ)ಹಾರುವ ತಟ್ಟೆಗಳು

ಹಾರುವ ತಟ್ಟೆಯೊಂದು

ಬಿಳಿಯ ಮೋಡದೊಳಗೆ

ಮಿಂಚಂತೆ ಸೆಳೆಯುವಾಗ

ನೆನ್ನೆ ಕನವರಿಸಿದ

ಶ್ವೇತ ದೇವತೆಯೊಬ್ಬಳು

ಇಳಿದು

ಬರಬಹುದೆಂದು

ಕಾದು ಕೂತು-

ಮೋಹ ದೇವತೆ ನೀನು

ಕೈಯಲ್ಲಿ ಅಮೃತವನ್ನಿಟ್ಟುಕೊಂಡು

ಗುಟುಕೂ ಕೊಡದೆ ಮಾಯವಾದವಳು

ಮತ್ಸ ಕನ್ಯೆ ನೀನು

ನೀರಲ್ಲಿ ಗಾಳಿ ಬಲೂನು

ಹೊತ್ತು ಹೊರಟೆ

ಮೀನ

ನೀರ

ಆಳದಲ್ಲಿ

ಅಲೆಯೊಂದು

ಅಬ್ಬರಿಸಿ ನಿಂತಂತೆ

ತಿಮಿಂಗಲದ ಅಡಿಯ ನೆರಳಲ್ಲಿ

ಹೂಮರಿಗಳು

ಪಯಣ ಹೊರಟಂತೆ

ಹೊರಟಿದ್ದೆ

ಹೊತ್ತೊಯ್ದ

ಅಲೆಯೊಂದು

ದಡ ಮುಟ್ಟಿಸಿ

.. …

ಮತ್ಸ ಕನ್ಯೆ

ಮೋಹದೇವತೆ

ಬೆಳದಿಂಗಳು

ರಾತ್ರಿ ಕತ್ತಲಲ್ಲಿ

ಹಾರುವ ತಟ್ಟೆಯೊಂದಿಗೆ

ಅದೃಶ್ಯವಾದ

ದೇವತೆಯೇ

ಮೋಹಕ ಬೆಳದಿಂಗಳು

ಇತ್ತ

ಮೋಹಕತೆಯನ್ನು

ನನಗೊಂದಿಷ್ಟು

ಕೊಡೇ

ಎಂದು ರಸವಾದಿಯಂತೆ

ಹುಡುಕುತ್ತ ಹೊರಟೆ.

ಅಲ್ಲಿ ಎನೋ ಇರಬಹುದೆಂದು

ಕತ್ತಲಲ್ಲಿ ತಡಕಾಡುವಾಗ

ಅಡುಗೆ ಮನೆಯಲ್ಲಿ

ರಾತ್ರಿ ಊಟ ತಿಂದು

ಖಾಲಿ ಕೂತ

ತಟ್ಟೆಗಳೆಲ್ಲ

ಹಾರತೊಡಗಿದವು !

 (ಕನ್ನಡಪ್ರಭ  ಪತ್ರಿಕೆಯಲ್ಲಿ ಪ್ರಕಟವಾದ ಕವನ)

ಗುಲಾಬಿಯ ಗಿಡ

ಗುಲಾಬಿ ಗಿಡವೊಂದನ್ನು ಬೆಳೆಯುವುದೆಂದರೆ

ಸುಲಭ ಸಾಧ್ಯವಲ್ಲ ಬಿಡು.

ಅದಕ್ಕೆ ಅಣಿ ಮಾಡಿರಬೇಕು

ಫಲವತ್ತಾದ ಕರಿಕೆಂಪು ಮಿಶ್ರಿತ ಮಣ್ಣು

ಹದವಾದ ತೇವಕ್ಕೆ ಬೇಕಾದಷ್ಟು

ನೀರಿನ ಪಸೆ

ಅರೆಕೋರೆಯಾಗಿ ಬೀಳುವಂತಹ

ಗಾಢ ಬೆಳಕು, ಮಂದ್ರ ಬಿಸಿಲು

ಈಗ ನೋಡು

ಬೇರು ಇರಲೇಬೇಕೆಂದಿಲ್ಲ, ಬಲಿತ ಗಿಡದ

ಕೊಂಬೆಯಾದರೂ ಸರಿಯೇ

ಕಚ್ಚು ಕಚ್ಚಾದ ಏಟು ಬೀಳದಂತೆ

ಕೊಂಬೆ ಕತ್ತರಿಸಿ

ಗಿಡದಿಂದ ಗೇಣುದ್ದ ಓರೆಯಾಗಿ ತೆಗೆದು

ಸಿದ್ದಗೊಳಿಸಿದ ಪಾತಿಯಲ್ಲಿ ಅರ್ಧದಷ್ಟು

ಹೂತು ಬಲವಾಗಿ

ಮೇಲೆ ಕತ್ತೆತ್ತಿದ ಅದರ ತಲೆಗೆ

ಇಸ್ಶೀ ಅಂದುಕೊಳ್ಳದೆ ಸಗಣಿ ಟೊಪ್ಪಿಗೆ

ಇಟ್ಟು, ಸಿಂಪಡಿಸಿ ನೀರು ಸುತ್ತಲೂ

ಬಿಡಬೇಕು ತೆವಳಲು

ಕೆಳಗೆ ಬೇರಿಗೆ ಹಾಗೇ ಮೇಲಿನ ಚಿಗುರಿಗೆ

ಬಸಿರು ಚಿಗುರಿ ಮೊಗ್ಗು ಹೂವಾಗುವ

ಹೊತ್ತಿಗೆ ಹಾರಿ…ನೆನಪಿಡು

ಸುತ್ತಲೂ ತೇಲಿಸಬೇಕು ಬೇಲಿ

ಇಲ್ಲವಾದರೆ ನಿನ್ನ ಮರೆವಿಗೂ ಇದೆ ಮದ್ದು

ಗಿಡಕ್ಕೆ ಸ್ವತಃ ಆತ್ಮರಕ್ಷಣೆ ಗೊತ್ತುಂಟು

ಆತುರಗಾರನ ಕೈತುಂಬಾ ಚುಚ್ಚುಮುಳ್ಳು

ಗುಲಾಬಿ ಗಿಡ ಉದ್ದ..ಕ್ಕೆ ಹಬ್ಬದಂತೆ

ಆಗಾಗ ಕತ್ತರಿಸಿ ಹದ ಮಾಡಬೇಕು

ಕತ್ತರಿಸಿದ ಕಡೆಯೆಲ್ಲಾ ಮತ್ತಷ್ಟು

ಹೊಸಚಿಗುರು ಹೊಳೆದು ಗಿಡವೀಗ ಪೊದೆ

ಹೂ ಬಿಡುವ ಕಾಲಕ್ಕೋ

ಪೊದೆ ಪೂ…ರಾ ಹೂವಿನೆದೆ

ಹಾಗಾಗಿ

ಗುಲಾಬಿ ಗಿಡ ಬೆಳೆಯುವುದೆಂದರೆ

ಸುಮ್ಮನೇ ಅಲ್ಲ ನೋಡು

ಕುಸುರಿ ಕಲೆಯ ಸೂಕ್ಷ್ಮ ಧ್ಯಾನ ಗೊತ್ತಿದ್ದರೇ ಸೈ

ಅದಕ್ಕೇ ಹೇಳುತ್ತೇನೆ ಕೇಳು

ಪ್ರೇಮವೆಂದರೆ ಏನೆಂದುಕೊಂಡೆ ಗೆಳೆಯಾ?

ಬರೀ ಗುಲಾಬಿಯಾ?

ಊಹೂಂ ಇಡೀ ಗುಲಾಬಿ ಗಿಡ

 (ನನಗೆ ಇಷ್ಟವಾದ ಕೆ. ಎನ್. ಲಾವಣ್ಯ ಪ್ರಭ ಅವರ ಎರಡು ಗುಲಾಬಿಯ ಪದ್ಯಗಳು)

ಮುಳ್ಳಿನ ಗುಲಾಬಿ

ಎಷ್ಟೊಂದು ಇಷ್ಟಪಟ್ಟು ಯಾರದ್ದೋ
ಕಾಂಪೌಂಡಿನಲ್ಲಿದ್ದುದ್ದನ್ನು ಆ ಮನೆಯೊಡೆಯನ
ಬೇಡಿ ಕಾಡಿ ಒಂದಿಷ್ಟು ಕೊಂಬೆ ಕತ್ತರಿಸಿ
ತಂದು ಮನೆಯಂಗಳದ ಮಣ್ಣಿನೊಳಗೆ ನೆಟ್ಟು
ಅಕ್ಕಿ ತೊಳೆದ ನೀರು, ಸುಲಿದಿಟ್ಟ ತರಕಾರಿ ಸಿಪ್ಪೆ
ಕಪ್ಪಿನೊಳಗುಳಿದ ಚಹಾದ ಗಸಿ
ಎಲ್ಲಾ ಸುರಿಸುರಿದು ಅಂತೂ ಚಿಗುರಿದೆಲೆಗಳ
ನಡುವೆ ನಾಚಿ ಕುಳಿತಿವೆ ಮೊಗ್ಗು
ಪದರ ಪದರಗಳ ಬಿರಿದೂ ಬಿರಿಯದಂತೆ

ನೀಳತೊಟ್ಟು ಮೇಲೆ ಫ್ರಾಕು ತೊಟ್ಟ ಹಾಗೆ
ಪುಷ್ಪಪಾತ್ರೆ ನಿರಿಗೆ ಅಗಲಿಸಿದ ಕುಳಿಯೊಳಗೆ
ಮೊಗ್ಗಿನ ಮೊಟ್ಟೆ ಒಡೆದು ಒಂದೆರಡು ದಿನಗಳಲ್ಲೇ
ಅರಳುತ್ತಿದೆ ಹೂವು ನಿಧಾನಕ್ಕೆ
ಹೂವ ಚಂದಕ್ಕೆಂದೇ ಚಾಚಿಕೊಂಡಿದೆ ಸುತ್ತಲೂ
ಕಳಸಕ್ಕೆ ಜೋಡಿಸಿಟ್ಟಂತೆ ಮೂರು ಎಲೆ.
ಚಿಗುರಿದ ಹೊಸ ಗಿಡಕ್ಕೆ ಇದೀಗ ದೃಷ್ಟಿಬೊಟ್ಟು
ರಕ್ತವರ್ಣದ ಗುಲಾಬಿ ಪೂರಾ ಅರಳದೆಯೇ
ನಗುತ್ತಿದೆ ಅಥವಾ ನಕ್ಕಂತೆ ಭಾಸವಾಗುತ್ತಿದೆ.

ದಿನ ಪ್ರತಿಕ್ಷಣ ನಕ್ಕುನಕ್ಕೇ ಧ್ಯಾನಿಸುವ
ಗುಲಾಬಿ ಅಮಲಿಗೆ ರೋಸಿ ಮುಖ ತಿರುವಿ
ಅಡ್ಡಾಡಿದೆ.
ಈ ಮಾಟಗಾತಿಗೇನಾಗಿದೆಯೋ ಬೇರೆ ಇರಾದೆ?
ಸಂಶಯಕ್ಕೋ ಹೊಟ್ಟೆಕಿಚ್ಚಿಗೋ ತಲೆತುಂಬಾ
ಹುಳು ಬಿಟ್ಟುಕೊಂಡು ಸಂಶೋಧನೆಗೆ ನಿಂತಿದೆ
ಮನಸ್ಸು, ಮಿದುಳು.

ಕೊನೆಗೆ ಅದೇ ಕಣ್ಣು ಕುಕ್ಕುವ ನಗುವಿನ
ಜಾಡು ಹಿಡಿದು ಹೊರಟಂತೆಲ್ಲಾ ..
ಓಹ್, ಗುಲಾಬಿ ನಗುವಿನ ಗುಟ್ಟೀಗ ರಟ್ಟು!
ಈಗಂತೂ ನನಗೆ ಚುರು ಚೂರೇ ಕನಿಕರ
ಪಾಪ, ಗುಲಾಬಿಯದು ಅದೆಂಥಾ ಮಾಸದ ನಗೆ?
ಹಾಗೇ..
ಯಾಕೆ ನೆನಪಾಗಬೇಕೀಗ ಕ್ರಿಸ್ತ ಕ್ಷಣ ನನಗೆ ?

ದಿನ ಪ್ರತಿಕ್ಷಣ ನಕ್ಕುನಕ್ಕೇ ಧ್ಯಾನಿಸುವ
ಗುಲಾಬಿ ಅಮಲಿಗೆ ರೋಸಿ ಮುಖ ತಿರುವಿ
ಅಡ್ಡಾಡಿದೆ.
ಈ ಮಾಟಗಾತಿಗೇನಾಗಿದೆಯೋ ಬೇರೆ ಇರಾದೆ?
ಸಂಶಯಕ್ಕೋ ಹೊಟ್ಟೆಕಿಚ್ಚಿಗೋ ತಲೆತುಂಬಾ
ಹುಳು ಬಿಟ್ಟುಕೊಂಡು ಸಂಶೋಧನೆಗೆ ನಿಂತಿದೆ
ಮನಸ್ಸು, ಮಿದುಳು.

ಕೊನೆಗೆ ಅದೇ ಕಣ್ಣು ಕುಕ್ಕುವ ನಗುವಿನ
ಜಾಡು ಹಿಡಿದು ಹೊರಟಂತೆಲ್ಲಾ ..
ಓಹ್, ಗುಲಾಬಿ ನಗುವಿನ ಗುಟ್ಟೀಗ ರಟ್ಟು!
ಈಗಂತೂ ನನಗೆ ಚುರು ಚೂರೇ ಕನಿಕರ
ಪಾಪ, ಗುಲಾಬಿಯದು ಅದೆಂಥಾ ಮಾಸದ ನಗೆ?
ಹಾಗೇ..
ಯಾಕೆ ನೆನಪಾಗಬೇಕೀಗ ಕ್ರಿಸ್ತ ಕ್ಷಣ ನನಗೆ ?

-ಕೆ. ಎನ್. ಲಾವಣ್ಯ ಪ್ರಭ, ಮೈಸೂರು

 

 

ಸಮುದ್ರ ನೆನಪಿಸಿಕೊಂಡಾಗ ( ಡಾ. ವೆಂಕಟೇಶ ರಾವ್ ಕವಿತೆ)

ಮಂಡಿಯೂರಿ ಕುಳಿತಿವೆ ಸಮುದ್ರದ ಅಲೆಗಳೆಲ್ಲ

ನೀರಿನ ಗೋಡೆ ಬಿಸುಡಿದೆ ತಿಮಿಂಗಿಲವ ಹೊರಗೆ

ಸಮುದ್ರದ ಬಾಯಲ್ಲಿ ನದಿಯ ನಾಲಗೆ

ಒರಗಿದೆ ತಾಳೆಮರ ಸೂರ್ಯನ ಕಿರಣಗಳಿಗೆ

ನೊರೆಯಲ್ಲಿ ಮುಳುಗಿದ

ವಿಕಾರದ ವಕ್ರ ಮೋಡಗಳೆಲ್ಲ

ಸಹಿ ಹಾಕಿವೆ ನಿಗೂಡ ಹೆಸರುಗಳೆಲ್ಲ

ಉಸುಕಿನ ಮುಸುಕಿನಲ್ಲಿ

ಸಮುದ್ರದ ಸಮಯವಿದು

ಮಾತು ಮರೆತ ಪ್ರೇಮಿಗಳ

ಶಂಖ ಮೃದ್ವಂಗಿಗಳ

ನೆನಪಲ್ಲಿ ಅದು ಈಜಾಡುತ್ತಿದೆ

ಸಮುದ್ರದ ಶೂನ್ಯ ತುಂಬಲು

ಬಂಡೆಗಳು ಮೂಡಿವೆ

ಕಣಿವೆಯೊಳಗೆ ಓಡಾಡುತ್ತಿವೆ ಗಾಳಿ

ಖಾಲಿ ಕೈಯಲ್ಲಿ

ಉಪ್ಪು ತಿಂದ ಗಾಳಿ

ನುಂಗಿದೆ ಪದಗಳನ್ನು

ಸಣ್ಣ ಅಲೆಗಳ ಸಪ್ಪಳಕ್ಕೆ

ಎದ್ದಿದೆ ಮುಂಜಾನೆ

ಮಳೆಯ ಜೊತೆ ಬೆಟ್ಟವೂ ಇಳಿದಿದೆ

ಸಮುದ್ರಕ್ಕೆ

ಮುದಿಜೋಡಿ ನಿಂತಿದೆ ತುತ್ತತುದಿಯಲ್ಲಿ

ಮನೆಗೆ ಮರಳುವ ಯೋಚನೆಯಲ್ಲಿ

ಹುಟ್ಟುವ ಮೊದಲು ಕೇಳಿದ

ಭಾರೀ ಶಬ್ದ

ಅದು ಅಮ್ಮನ ಆಕ್ರಂದನವೇ

ದೋಣಿ ಚಿಂತಿಸುತ್ತಾ ಕುಳಿತಿದೆ

ಬೇಸಗೆಯ ತಂಗಾಳಿಗೆ

ಗಾಳಿಪಟ ಅಂಟಿಸಿದ್ದಾನೆ ಹುಡುಗ

ಅಲೆಗಳಿಗೆ ಬಲೆ ಹಾಕೋ

ಕೊಲೆಗಾರ ಚೆಲುವ

ಸುಕ್ಕು ಸುಕ್ಕು ಮುದುಕಿ ಸಮುದ್ರ

ಏನೋ ಪಿಸು ನುಡಿಯುತ್ತಿದೆ

ನಗರದ ನಾಗರೀಕರು ಶೂ ಕಳಚುತ್ತಿದ್ದಾರೆ

ಯಾರೋ ನಡೆದಂತೆ ಕೇಳುತ್ತಿದೆ

-ಡಾ. ವೆಂಕಟೇಶ ರಾವ್

 

ಪುಟ್ಟ ಬೆಕ್ಕಿನ ವರಾತ.

ಹಿ೦ದಿನ ಜನ್ಮದಲ್ಲಿ ಬೆಕ್ಕು ಆಗಿರಬಹುದೇ!

ಅಡಿಗಡಿಗೂ ಹಾಲು ಕೇಳುತ್ತದೆ ಮಗು

ಸಕ್ಕರೆ ಸಾಲದೆ೦ಬ ವರಾತ,
ನಿದ್ದೆಯಲ್ಲೂ ಹಾಲಿನ ನೆನಪು

ಒ೦ದು ಥರಾ
ವಿಶಿಷ್ಟ ಬೆಕ್ಕು
ಇದು-
ಅಮ್ಮ ಇಲ್ಲದಾಗ
ಕಳ್ಳ ಹೆಜ್ಜೆ ಇಟ್ಟು
ಡಬ್ಬಗಳನ್ನು ಹುಡುಕುತ್ತದೆ;
ಅಮ್ಮ ಇಟ್ಟ ಚಾಕೊಲೇಟುಗಳನ್ನು
ಮಾಯ ಮಾಡುತ್ತದೆ.

ಈ ಬೆಕ್ಕಿಗೆ ಹಾಲಿನವಳನ್ನೇ

ಗ೦ಟು ಹಾಕಬೇಕು ಅ೦ತ-
ಯೋಚಿಸುತ್ತಾಳೆ ಅವರಮ್ಮ
’ಮದುವೆಯೇ ಆಗುವುದಿಲ್ಲ”
ಅನ್ನುತ್ತದೆ ಪುಟ್ಟಬೆಕ್ಕು

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”
ಎಲ್ಲಿಗೆ ಹೋಗಿದ್ದೆ?
ಅಮ್ಮ ಇಟ್ಟ ಹಾಲನು
ಹುಡುಕಲು ಹೋಗಿದ್ದೆ!

ನಕ್ಷತ್ರ ಪುಂಜ

ಚಿತ್ರ: ಚಂದ್ರು ಕೋಡಿ, ಕುಂದಾಪುರ

ಅವಳು
ಇಡುತ್ತಿದ್ದ
ರ೦ಗೋಲಿ ನೋಡಿ
ಬೆಳಗು ಮುನಿಸಿಕೊ೦ಡಿತು!
ಸ೦ಜೆ ಹತ್ತಿರವಾಯಿತು.


ಕ೦ತುವ ನಕ್ಷತ್ರಗಳ ನೋಡಿ
ಸೂರ್ಯ ಗಹಗಹಿಸಿದ
ಚ೦ದ್ರ ವಿಷಾದಿಸಿದ


ಮುಳುಗುವ ಸೂರ್ಯನ ನೋಡಿ
ಚ೦ದ್ರ ಓರೆಗಣ್ಣಲ್ಲಿ ನಾಚಿದ
ನಕ್ಷತ್ರಗಳು ಕಿಸಕ್ಕನೆ ನಕ್ಕವು!


ಎಲೈ ಸೂರ್ಯನೇ ಹೇಳು
ಎಲ್ಲಿ ಬಚ್ಚಿಟ್ಟಿರುವೆ ನಕ್ಷತ್ರಗಳನ್ನು?
ನನ್ನ ಮನೆಯ ಆ೦ಗಳದ
ರ೦ಗೋಲಿಯನ್ನು ಮಾತ್ರ ನೀನು ಅಳಿಸಲಾರೆ!


ಇಗೋ ನೋಡು ಸೂರ್ಯ
ನೀನೂ ಒ೦ದು ನಕ್ಷತ್ರ ಮರೆಯಬೇಡ
ನಿನ್ನ ಅವಸಾನವೂ ನನ್ನ ಹಾಗೆ!

ಚ೦ದ್ರನ ಸ್ವಾಗತಕ್ಕೆ

ನಕ್ಷತ್ರಗಳ ರ೦ಗೋಲಿ
ಸೂರ್ಯನ ಕಣ್ಣೀರು

ಸೂರ್ಯನ ಕಣ್ಣೀರಿಗೆ
ನಕ್ಷತ್ರಗಳು ಕರಗಿದವು
ಬೆಳಗಿನಲಿ ಸೂರ್ಯನದು
ಮತ್ತೆ ಅಟ್ಟಹಾಸ:
ಸೂರ್ಯನಿಗೊ೦ದು ಕಾಲ
ನಕ್ಷತ್ರಗಳಿಗೊ೦ದು ಕಾಲ

ಇಲ್ಲಿ ಕೇಳು ಮಗಳೇ
ಆಕಾಶದಲ್ಲಿ ಮಿನುಗುವ
ನಕ್ಷತ್ರಗಳೆಲ್ಲ
ನಾನಿಟ್ಟ ರ೦ಗೋಲೆಗಳೇ!